ಬೆಳ್ತಂಗಡಿಯಲ್ಲಿ ಮಳೆಯಾರ್ಭಟ: ತುಂಬಿ ಹರಿಯುತ್ತಿರುವ ನೇತ್ರಾವತಿ ನದಿ, ತಾಲೂಕಿನಾದ್ಯಂತ ಜಲಾವೃತಗೊಂಡು ಕಡಿತಗೊಂಡ ಸಂಪರ್ಕ!

belthangady rain
01/08/2026

ಬೆಳ್ತಂಗಡಿ ತಾಲೂಕಿನಾದ್ಯಂತ ಬೆಳಿಗ್ಗೆಯಿಂದಲೇ ಭಾರಿ ಮಳೆಯಾಗುತ್ತಿದ್ದು, ಧರ್ಮಸ್ಥಳದ ಪವಿತ್ರ ನೇತ್ರಾವತಿ ನದಿ ಸೇರಿದಂತೆ ತಾಲೂಕಿನ ಪ್ರಮುಖ ನದಿ-ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ನದಿ ತೀರದ ನಿವಾಸಿಗಳಲ್ಲಿ ಪ್ರವಾಹ ಹಾಗೂ ಜಲಾವೃತ ಭೀತಿ ಎದುರಾಗಿದೆ.

ಬೆಳ್ತಂಗಡಿ–ಕಿಲ್ಲೂರು ರಸ್ತೆಯ ಪುತ್ರಬೈಲು ಬಳಿ ನದಿ ನೀರು ರಸ್ತೆಗೆ ಬಂದಿದ್ದು, ವಾಹನ ಸಂಚಾರ ಸಂಪೂರ್ಣ ತಡೆಯಾಗಿದೆ.

ಬಿರುಗಾಳಿಯೊಂದಿಗೆ ಸುರಿಯುತ್ತಿರುವ ಮಳೆಯಿಂದಾಗಿ ಅರಣ್ಯದಂಚಿನ ಪ್ರದೇಶಗಳಲ್ಲಿ ಬೃಹತ್ ಮರಗಳು ಧರೆಗುರುಳುವ ಆತಂಕ ವ್ಯಕ್ತವಾಗಿದೆ. ನೆರಿಯಾ ಸಿಯೋನ್ ಆಶ್ರಮದ ತಡೆಗೋಡೆ ಮಳೆಯ ರಭಸಕ್ಕೆ ಕುಸಿದು ಬಿದ್ದಿದೆ.

ಉಜಿರೆ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ನದಿಯಂತೆ ಹರಿಯುತ್ತಿದ್ದು, ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ನಾವೂರು ಪೇಟೆಯ ಅಂಗಡಿ-ಮುಂಗಟ್ಟುಗಳಿಗೆ ಹಾಗೂ ಮುಂಡಾಜೆ ಸುತ್ತಮುತ್ತಲಿನ ಹಲವು ಮನೆ, ಗದ್ದೆ ಮತ್ತು ತೋಟಗಳಿಗೆ ನೀರು ನುಗ್ಗಿದೆ.

ತಾಲೂಕಿನಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಿಂಡಿ ಅಣೆಕಟ್ಟುಗಳ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳ ನಡುವಿನ ಸಂಪರ್ಕ ವ್ಯವಸ್ಥೆ ಸಂಪೂರ್ಣ ಕಡಿತಗೊಂಡಿದೆ.

ಮುಂಡಾಜೆ ಸುತ್ತಮುತ್ತ ಅತ್ಯಂತ ಭಾರಿ ಮಳೆಯಾಗುತ್ತಿದ್ದು, ನದಿ–ತೋಡುಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಅಡಿಕೆ ತೋಟಗಳು ಹಾಗೂ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು, ಕೃಷಿಕರು ಅಪಾರ ಬೆಳೆ ಹಾನಿಯ ಭೀತಿಗೆ ಒಳಗಾಗಿದ್ದಾರೆ.

ಮಳೆ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಸ್ಥಳೀಯ ಆಡಳಿತ ಹಾಗೂ ಸಾರ್ವಜನಿಕರು ತೀವ್ರ ಎಚ್ಚರಿಕ ವಹಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version