ಅಧಿಕಾರಿಗಳ ಗೈರುಹಾಜರಿ: ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮಸಭೆ ಬಹಿಷ್ಕರಿಸಿ ಗ್ರಾಮಸ್ಥರ ಆಕ್ರೋಶ

mudigere
30/07/2026

ಮೂಡಿಗೆರೆ: ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರುಹಾಜರಾದ ಹಿನ್ನೆಲೆಯಲ್ಲಿ, ಹುಲ್ಲೇಮನೆ ಹಾಗೂ ಕುಂದೂರು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸಭೆಯನ್ನು ಬಹಿಷ್ಕರಿಸಿದ ಘಟನೆ ನಡೆದಿದೆ.

ಕಳೆದ ಐದು ವರ್ಷಗಳಿಂದ ಕುಂದೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದೆ ಸಂಪೂರ್ಣ ಕುಂಠಿತಗೊಂಡಿವೆ ಎಂಬುದು ಗ್ರಾಮಸ್ಥರ ಮುಖ್ಯ ಆರೋಪವಾಗಿದೆ. ರಸ್ತೆ, ಕುಡಿಯುವ ನೀರು ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ನಿತ್ಯ ಎದುರಾಗುತ್ತಿರುವ ಗಂಭೀರ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಹುಲ್ಲೇಮನೆ ಮತ್ತು ಕುಂದೂರು ಭಾಗದ ನೂರಾರು ಗ್ರಾಮಸ್ಥರು ಸಭೆಗೆ ಆಗಮಿಸಿದ್ದರು.

ಆದರೆ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಬೇಕಾದ ಪ್ರಮುಖ ಇಲಾಖೆಗಳ ಅಧಿಕಾರಿಗಳೇ ಸಭೆಗೆ ಗೈರಾಗಿದ್ದರು. ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು, “ಗ್ರಾಮಸ್ಥರ ಸಮಸ್ಯೆಗಳನ್ನು ಕೇಳಲು ಆಸಕ್ತಿ ಇಲ್ಲದಿದ್ದರೆ ಈ ಸಭೆ ನಡೆಸಿ ಏನು ಪ್ರಯೋಜನ?” ಎಂದು ಆಡಳಿತ ಮಂಡಳಿಯನ್ನು ಪ್ರಶ್ನಿಸಿ, ಸಭೆಯಿಂದ ಹೊರನಡೆದು ಪ್ರತಿಭಟನೆ ದಾಖಲಿಸಿದರು.


“ಕಳೆದ ಐದು ವರ್ಷಗಳ ಅಭಿವೃದ್ಧಿ ಶೂನ್ಯಕ್ಕೆ ಪಂಚಾಯ್ತಿ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳೇ ಸಂಪೂರ್ಣ ಹೊಣೆ.”

— ಸಂತ್ರಸ್ತ ಗ್ರಾಮಸ್ಥರು


ಕಳೆದ ಐದು ವರ್ಷಗಳ ಅಭಿವೃದ್ಧಿ ಶೂನ್ಯಕ್ಕೆ ಪಂಚಾಯ್ತಿ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿರುವ ಗ್ರಾಮಸ್ಥರು, ತಕ್ಷಣವೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳ ಕಡ್ಡಾಯ ಉಪಸ್ಥಿತಿಯಲ್ಲಿ ಶೀಘ್ರವೇ ಮರು ಗ್ರಾಮಸಭೆ ಕರೆದು ಗ್ರಾಮದ ಮೂಲಸೌಕರ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಉಗ್ರ ಹೋರಾಟದ ಎಚ್ಚರಿಕೆ:

ಸಂಬಂಧಪಟ್ಟ ಇಲಾಖಾಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆ ಮತ್ತು ಬೇಜವಾಬ್ದಾರಿತನ ಹೀಗೆಯೇ ಮುಂದುವರಿದಲ್ಲಿ, ಮುಂಬರುವ ದಿನಗಳಲ್ಲಿ ಮೂಡಿಗೆರೆ ತಾಲ್ಲೂಕು ಕಚೇರಿಯ ಎದುರು ಉಗ್ರ ಮಟ್ಟದ ಹೋರಾಟ ರೂಪಿಸುವುದಾಗಿ ಗ್ರಾಮಸ್ಥರು ಖಡಕ್ ಎಚ್ಚರಿಕೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version