ಭಾರತೀಯ ಹಾಕಿ ತಂಡದ ಜರ್ಸಿ ನೀಲಿ ಬಣ್ಣದಿಂದ ಕೇಸರಿಗೆ ಬದಲಾಗಿದ್ದು ಏಕೆ? ಹಾಕಿ ಇಂಡಿಯಾ ಸ್ಪಷ್ಟನೆ ಏನು?

hockey india
30/07/2026

ನವದೆಹಲಿ:  2026ರ ಎಫ್‌ ಐಎಚ್‌ (FIH) ಹಾಕಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳು ತಮ್ಮ ಸಾಂಪ್ರದಾಯಿಕ ‘ನೀಲಿ’ (Blue) ಬಣ್ಣದ ಜೆರ್ಸಿಯ ಬದಲಾಗಿ ‘ಕೇಸರಿ’ (Saffron) ಬಣ್ಣದ ಜೆರ್ಸಿಯನ್ನು ಧರಿಸಲಿವೆ. ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಹಾಕಿ ಇಂಡಿಯಾ (Hockey India) ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರಣಗಳನ್ನು ನೀಡಿ ಸ್ಪಷ್ಟನೆ ನೀಡಿದೆ.

ಅಂತರರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ಈಗ ನೀಲಿ ಬಣ್ಣದ ಸಿಂಥೆಟಿಕ್ (ಕೃತಕ) ಟರ್ಫ್ (ಆಟದ ಮೈದಾನ) ಬಳಸುವುದು ಸಾಮಾನ್ಯವಾಗಿದೆ. ನೀಲಿ ಬಣ್ಣದ ಮೈದಾನದಲ್ಲಿ ನೀಲಿ ಜೆರ್ಸಿ ಧರಿಸಿ ಆಡುವಾಗ, ಆಟಗಾರರಿಗೆ ತಮ್ಮ ಸಹ ಆಟಗಾರರು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಇದರಿಂದಾಗಿ ಪಾಸ್ ನೀಡುವುದು ಹಾಗೂ ಆಟದ ತಂತ್ರಜ್ಞಾನದಲ್ಲಿ ತೊಂದರೆಯಾಗುತ್ತಿತ್ತು ಎಂದು ತರಬೇತುದಾರರು ಮತ್ತು ಆಟಗಾರರು ತಿಳಿಸಿದ್ದರು.

ಆಟಗಾರರು ಮತ್ತು ಕೋಚ್‌ಗಳ ಸಲಹೆಯಂತೆ ಹಳದಿ ಅಥವಾ ಕೇಸರಿ ಬಣ್ಣವನ್ನು ಪರಿಶೀಲಿಸಲಾಯಿತು. ಅಂತಿಮವಾಗಿ ತಾಂತ್ರಿಕ ಸವಾಲನ್ನು ಮೆಟ್ಟಿಬೆಳೆಯಲು ಹಾಗೂ ರಾಷ್ಟ್ರೀಯ ಭಾವನೆಗೆ ಸೂಕ್ತವಾಗುವಂತೆ ಕೇಸರಿ ಬಣ್ಣವನ್ನು ಅಂತಿಮಗೊಳಿಸಲಾಯಿತು.

ರಾಷ್ಟ್ರೀಯ ಧ್ವಜದ ಸಂಕೇತ:

ಕೇಸರಿ ಬಣ್ಣವು ಭಾರತದ ತ್ರಿವರ್ಣ ಧ್ವಜದ ಪ್ರಮುಖ ಭಾಗವಾಗಿದ್ದು, ಇದು ಶೌರ್ಯ, ತ್ಯಾಗ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ.  ಆಳವಾದ ನೇವಿ ಬ್ಲೂ (Navy Blue) ಬಾರ್ಡರ್‌ ಗಳು ಅಶೋಕ ಚಕ್ರದಿಂದ ಪ್ರೇರಿತವಾಗಿದ್ದು, ಪ್ರಗತಿ ಮತ್ತು ಶಾಂತಿಯನ್ನು ಸೂಚಿಸುತ್ತವೆ. ಮಂಡಲ ಹಾಗೂ ಸುದರ್ಶನ ಚಕ್ರ ವಿನ್ಯಾಸ  ಭಾರತದ ಸಾಂಸ್ಕೃತಿಕ ಪರಂಪರೆ, ಶಕ್ತಿ ಮತ್ತು ಏಕತೆಯನ್ನು ಬಿಂಬಿಸುವ ಡಿಸೈನ್‌ ಗಳನ್ನು ಎದೆಯ ಭಾಗದಲ್ಲಿ ಬಳಸಲಾಗಿದೆ. ದೇವನಾಗರಿ ಲಿಪಿಯಲ್ಲಿ ‘INDIA’: ದೇಶದ ವೈವಿಧ್ಯಮಯ ಭಾಷಿಕ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಸಾರಲು ದೇವನಾಗರಿ ಲಿಪಿಯಲ್ಲಿ ‘INDIA’ ಎಂದು ಬರೆಯಲಾಗಿದೆ. ಇದಲ್ಲದೆ, ಆಟಗಾರರಿಗೆ ಎರಡನೇ ಆಯ್ಕೆಯಾಗಿ ಇದೇ ವಿನ್ಯಾಸದ ಬಿಳಿ ಬಣ್ಣದ ಜೆರ್ಸಿಯನ್ನೂ ಸಿದ್ಧಪಡಿಸಲಾಗಿದೆ  ಎಂದು ಸ್ಪಷ್ಟನೆ ನೀಡಲಾಗಿದೆ.

ಮಾಜಿ ನಾಯಕ ವೀರೇನ್ ರಸ್ಕಿನ್ಹಾ ಅಸಮಾಧಾನ:

ಈ ಬದಲಾವಣೆಯ ಕುರಿತು ಭಾರತ ಹಾಕಿ ತಂಡದ ಮಾಜಿ ನಾಯಕ ವೀರೇನ್ ರಸ್ಕಿನ್ಹಾ (Viren Rasquinha) ಸಾಮಾಜಿಕ ಜಾಲತಾಣ ‘X’ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.  “ಭಾರತೀಯ ಹಾಕಿ ತಂಡದ ಗುರುತು ಮತ್ತು ಪರಂಪರೆ ಯಾವಾಗಲೂ ‘ನೀಲಿ’ ಬಣ್ಣದಲ್ಲೇ ಇದೆ. ಅಭಿಮಾನಿಗಳು ನಮ್ಮ ತಂಡವನ್ನು ನೀಲಿ ಜೆರ್ಸಿಯಲ್ಲೇ ನೋಡಲು ಬಯಸುತ್ತಾರೆ. ಕೇಸರಿ ಅಥವಾ ಆರೆಂಜ್ ಬಣ್ಣದ ಅಗತ್ಯವೇನಿತ್ತು?” ಎಂದು ಅವರು ಪ್ರಶ್ನಿಸಿದ್ದಾರೆ.

ಈ ವಿವಾದಕ್ಕೆ ಉತ್ತರಿಸಿರುವ ಹಾಕಿ ಇಂಡಿಯಾ, ಜೆರ್ಸಿ ಬಣ್ಣ ಬದಲಾಯಿಸುವುದು ಇದೇ ಮೊದಲೇನಲ್ಲ ಎಂದು ಸ್ಪಷ್ಟಪಡಿಸಿದೆ.  2014ರ ವಿಶ್ವಕಪ್‌ ನಲ್ಲಿ ಹಳದಿ ಬಣ್ಣದ ಜೆರ್ಸಿ ಬಳಸಲಾಗಿತ್ತು.  2018ರ ವಿಶ್ವಕಪ್‌ ನಲ್ಲಿ ಸ್ಕೈ ಬ್ಲೂ (ಆಕಾಶ ನೀಲಿ) ಬಣ್ಣದ ಹೊಸ ವಿನ್ಯಾಸದ ಜೆರ್ಸಿ ಧರಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.

2026ರ ಎಫ್‌ ಐಎಚ್‌ ಹಾಕಿ ವಿಶ್ವಕಪ್ ಪಂದ್ಯಾವಳಿಯು ಆಗಸ್ಟ್ 15 ರಿಂದ 30 ರವರೆಗೆ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version