ಕರಿನೀರಿನ ಶಿಕ್ಷೆಗೆ ಒಳಗಾದ ಕನ್ನಡಿಗರ ಶೋಧ: ಸಾಹಿತ್ಯ ಅಕಾಡೆಮಿಯಿಂದ ‘ಯಾರೂ ಅರಿಯದ ವೀರರು’ ಯೋಜನೆ
ಬೆಂಗಳೂರು: ಬ್ರಿಟಿಷರ ಆಡಳಿತದ ಅವಧಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆಲ್ಯುಲರ್ ಜೈಲಿನಲ್ಲಿ ಕರಿನೀರಿನ (ಕಾಲಾಪಾನಿ) ಶಿಕ್ಷೆಗೆ ಒಳಗಾಗಿದ್ದ ಕನ್ನಡಿಗರ ಹೋರಾಟ ಮತ್ತು ನೈಜ ಜೀವನ ಚರಿತ್ರೆಯನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘ಯಾರೂ ಅರಿಯದ ವೀರರು’ ಎಂಬ ವಿನೂತನ ಶೋಧ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದ್ದಾರೆ.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹಾಗೂ ನರಗುಂದ ಬಂಡಾಯದಲ್ಲಿ ಭಾಗವಹಿಸಿ ಸೆಲ್ಯುಲರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ 59 ಕನ್ನಡಿಗರನ್ನು ಈಗಾಗಲೇ ಗುರುತಿಸಲಾಗಿದ್ದು, ಅವರ ತ್ಯಾಗ ಮತ್ತು ಇತಿಹಾಸವು ಮರೆಯಾಗದಂತೆ ತಡೆಯಲು ಪ್ರತಿಯೊಬ್ಬರ ಕುರಿತು ಪ್ರತ್ಯೇಕ ಪುಸ್ತಕ ಹಾಗೂ ಸಮಗ್ರ ಸಂಪುಟಗಳನ್ನು ಪ್ರಕಟಿಸಲು ಅಕಾಡೆಮಿ ನಿರ್ಧರಿಸಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ₹ 50 ಲಕ್ಷ ಅನುದಾನ ಒದಗಿಸಲು ಮುಂದಾಗಿದ್ದು, ಈಗಾಗಲೇ ₹ 25 ಲಕ್ಷ ಬಿಡುಗಡೆ ಮಾಡಿದೆ.
ಮಾಹಿತಿ ಹಾಗೂ ದಾಖಲೆಗಳ ಸಂಗ್ರಹಕ್ಕಾಗಿ ಹಿರಿಯ ಇತಿಹಾಸಕಾರರಾದ ವಿಜಯ್ ಪೂರ್ಣಚ್ಛ ಮತ್ತು ಕೆ.ಪಿ. ಸುರೇಶ್ ಅವರ ನೇತೃತ್ವದಲ್ಲಿ 15 ಸದಸ್ಯರ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ 8 ಸದಸ್ಯರು ದಾಖಲೆಗಳ ಸಂಗ್ರಹ ಕಾರ್ಯದಲ್ಲಿದ್ದರೆ, 7 ಸದಸ್ಯರು ಕ್ಷೇತ್ರ ಅಧ್ಯಯನ ನಡೆಸುತ್ತಿದ್ದು ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹೋರಾಟಗಾರರು ವಾಸವಿದ್ದ ಪ್ರದೇಶಗಳ ಗ್ರಂಥಾಲಯಗಳು, ಶಾಸನಗಳ ಅಧ್ಯಯನದ ಜೊತೆಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಲೇಖಕಿ ಲತಾ ಗುತ್ತಿ ಅವರ ‘ಕರಿ ನೀರು’ ಕಾದಂಬರಿಯಲ್ಲೂ ಕಾಲಾಪಾನಿ ಶಿಕ್ಷೆಗೆ ಒಳಗಾದ ಕನ್ನಡಿಗರ ಉಲ್ಲೇಖವಿದ್ದು, ಪ್ರಸ್ತುತ ವಿವಿಧೆಡೆ ಹಂಚಿಹೋಗಿರುವ ಅವರ ವಂಶಸ್ಥರನ್ನು ಸಂಪರ್ಕಿಸಿ ಪ್ರಸ್ತುತ ಸ್ಥಿತಿಗತಿಗಳನ್ನೂ ದಾಖಲಿಸಲು ನಿರ್ಧರಿಸಲಾಗಿದೆ. ಕರಿನೀರಿನ ಶಿಕ್ಷೆಗೆ ಒಳಗಾದ ನಾಡಿನ ವೀರರ ಮಾಹಿತಿ ಅಥವಾ ದಾಖಲೆಗಳು ಸಾರ್ವಜನಿಕರ ಬಳಿ ಇದ್ದಲ್ಲಿ ಅಕಾಡೆಮಿಯ ದೂರವಾಣಿ ಸಂಖ್ಯೆ 080–22211730, 22106460 ಅಥವಾ ಅಧಿಕೃತ ಇಮೇಲ್ sahithyaacademy.karnataka.gov.in ಮೂಲಕ ಹಂಚಿಕೊಳ್ಳುವಂತೆ ಮುಕುಂದರಾಜ್ ಮನವಿ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























