ಪ್ರತಿಭಟನೆಗೆ ವಿದೇಶಿ ಧನಸಹಾಯದ ಆರೋಪ ನಿಜವಾಗಿದ್ದರೆ, ಅದು ದೇಶದ ಭದ್ರತಾ ವೈಫಲ್ಯ, ಗೃಹ ಸಚಿವರೇ ಹೊಣೆ: ಸಿಜೆಪಿ ಮುಖಂಡ ಅಭಿಜೀತ್ ದೀಪ್ಕೆ
ಛತ್ರಪತಿ ಸಂಭಾಜಿನಗರ (ಔರಂಗಾಬಾದ್): ವಿದ್ಯಾರ್ಥಿ ಪ್ರತಿಭಟನೆಗಳಿಗೆ ವಿದೇಶಗಳಿಂದ ಧನಸಹಾಯ (Foreign Funding) ಸಿಗುತ್ತಿದೆ ಎಂಬ ಆರೋಪಗಳು ಒಂದು ವೇಳೆ ನಿಜವಾಗಿದ್ದರೆ, ಅದು ದೇಶದ ಭದ್ರತಾ ಸಂಸ್ಥೆಗಳ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ. ಈ ವೈಫಲ್ಯಕ್ಕೆ ಕೇಂದ್ರ ಗೃಹ ಸಚಿವರೇ ನೇರ ಹೊಣೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಛತ್ರಪತಿ ಸಂಭಾಜಿನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಶಿಕ್ಷಣ ವ್ಯವಸ್ಥೆ ಹಾಗೂ ಆಡಳಿತಾರೂಢ ಬಿಜೆಪಿಯ ರಾಜಕೀಯ ಧೋರಣೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಗಳ ಹಿಂದೆ ವಿದೇಶಿ ಹಸ್ತಕ್ಷೇಪ ಹಾಗೂ ಹಣಕಾಸು ನೆರವು ಇದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ದೀಪ್ಕೆ, “ಒಂದು ವೇಳೆ ಇದು ನಿಜವಾಗಿದ್ದರೆ, ದೇಶದ ಗೂಢಚಾರಿ ಮತ್ತು ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದರ್ಥ. ಇದಕ್ಕೆ ಗೃಹ ಸಚಿವಾಲಯವೇ ಜವಾಬ್ದಾರಿ ವಹಿಸಬೇಕು ಎಂದು ಅವರು ಬಿಜೆಪಿ ನಾಯಕರನ್ನು ಲೇವಡಿ ಮಾಡಿದರು.
ಕೇಂದ್ರ ಶಿಕ್ಷಣ ಸಚಿವರ ಬದಲಾವಣೆ ಕುರಿತು ಮಾತನಾಡುತ್ತಾ, ಹೊಸದಾಗಿ ಬಂದಿರುವ ಶಿಕ್ಷಣ ಸಚಿವರು ಹಳೆಯ ಸಚಿವರ “ಬದಲೀ ಪ್ರತಿ” (Replacement copy) ಯಂತಿದ್ದಾರೆ ಹೊರತು ಯಾವುದೇ ಬದಲಾವಣೆ ತಂದಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರವು ಗಂಭೀರ ಅಪರಾಧ ಹಾಗೂ ಅತ್ಯಾಚಾರ ಆರೋಪ ಹೊತ್ತವರನ್ನು ರಕ್ಷಿಸುತ್ತಿದೆ; ಆದರೆ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರ ಮೇಲೆ ಪೊಲೀಸರ ಮೂಲಕ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.
ತಮಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾರತೀಯ ಸಂವಿಧಾನ ಹಾಗೂ ಮಹಾತ್ಮ ಗಾಂಧೀಜಿಯವರ ತತ್ವಗಳಲ್ಲಿ ಪೂರ್ಣ ನಂಬಿಕೆ ಇದ್ದು, ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ಮಾರ್ಗದಲ್ಲೇ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಪದೇ ಪದೇ ನಡೆಯುತ್ತಿರುವ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಪ್ರಕರಣಗಳ ವಿರುದ್ಧ ಬೃಹತ್ ಹೋರಾಟದ ಅಗತ್ಯವಿದೆ ಎಂದರು. “ಚುನಾವಣಾ ರ್ಯಾಲಿಗಳಿಗೆ ವಿಶೇಷ ರೈಲುಗಳನ್ನು ಓಡಿಸುವ ಸರ್ಕಾರ, ಪೋಲಿಸ್ ನೇಮಕಾತಿ ಹಾಗೂ ಇತರ ಸರ್ಕಾರಿ ಪರೀಕ್ಷೆ ಬರೆಯಲು ದೂರದ ಜಿಲ್ಲೆಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಕನಿಷ್ಠ ಸಾರಿಗೆ ಹಾಗೂ ವಸತಿ ಸೌಕರ್ಯವನ್ನೂ ನೀಡದೆ ರಸ್ತೆ ಬದಿಯಲ್ಲಿ ರಾತ್ರಿ ಕಳೆಯುವಂತೆ ಮಾಡುತ್ತಿದೆ” ಎಂದು ಕಿಡಿಕಾರಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























