ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ: ದಲಿತ ಯುವಕನನ್ನು ವರಿಸಿದ್ದ 7 ತಿಂಗಳ ಗರ್ಭಿಣಿ ಮಗಳನ್ನೇ ಕೊಂದ ತಂದೆ!
ಹುಬ್ಬಳ್ಳಿ: ಅನ್ಯಜಾತಿ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ಮಗಳನ್ನು ಗರ್ಭಿಣಿ ಎಂದೂ ನೋಡದೇ ಹೆತ್ತ ತಂದೆಯೇ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿದೆ. 19 ವರ್ಷದ ಮಾನ್ಯ ಪಾಟೀಲ ಕೊಲೆಯಾದ ದುರ್ದೈವಿ.
ಘಟನೆಯ ಹಿನ್ನೆಲೆ: ಮಾನ್ಯ ಪಾಟೀಲ ಅದೇ ಗ್ರಾಮದ ದಲಿತ ಸಮುದಾಯದ ಯುವಕ ವಿವೇಕಾನಂದ ದೊಡ್ಡಮನಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ಮದುವೆಗೆ ಯುವತಿಯ ಮನೆಯವರಿಂದ ತೀವ್ರ ವಿರೋಧವಿತ್ತು. ಆದರೂ, ಪೊಲೀಸರ ಸಮ್ಮುಖದಲ್ಲಿ ನಡೆದ ರಾಜಿ ಪಂಚಾಯಿತಿಯ ನಂತರ ಏಳು ತಿಂಗಳ ಹಿಂದೆ ಈ ಜೋಡಿ ವಿವಾಹವಾಗಿತ್ತು. ಪ್ರಾಣ ಭಯದಿಂದ ಹಾವೇರಿಯಲ್ಲಿ ವಾಸಿಸುತ್ತಿದ್ದ ದಂಪತಿ, ಡಿಸೆಂಬರ್ 8ರಂದು ಗ್ರಾಮಕ್ಕೆ ಮರಳಿದ್ದರು.
ಭಾನುವಾರ ಸಂಜೆ ವೀರನಗೌಡ ಪಾಟೀಲ ಮತ್ತು ಆತನ ಸಂಬಂಧಿಕರು ದಂಪತಿಯ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಗರ್ಭಿಣಿ ಮಾನ್ಯಳ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ಆಕೆಯನ್ನು ರಕ್ಷಿಸಲು ಬಂದ ಪತಿ ವಿವೇಕಾನಂದ ಹಾಗೂ ಆತನ ಪೋಷಕರ ಮೇಲೂ ದಾಳಿ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಾನ್ಯ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವೀರನಗೌಡ, ಪ್ರಕಾಶ ಮತ್ತು ಅರುಣ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. “ಮಗಳ ಮದುವೆಗೆ ಪೋಷಕರ ಒಪ್ಪಿಗೆ ಇರಲಿಲ್ಲ, ಇದೇ ಕೃತ್ಯಕ್ಕೆ ಪ್ರಚೋದನೆ ನೀಡಿರಬಹುದು” ಎಂದು ಎಸ್‌ಪಿ ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























