ಆನೆ ಕಳವಾಗಿದೆ ಎಂದು ದೂರು ನೀಡಿದ ವ್ಯಕ್ತಿ: ತನಿಖೆ ನಡೆಸಿದಾಗ ಆಘಾತಕಾರಿ ಅಂಶ ಬಯಲು

ರಾಂಚಿ: ಆನೆ ಕಳವು ಎಂಬ ವಿಚಿತ್ರ ದೂರು ಬಂದ ಬೆನ್ನಲ್ಲೇ ಜಾರ್ಖಂಡ್ ಪೊಲೀಸರು ತೀವ್ರ ತನಿಖೆ ನಡೆಸಿ ಆನೆಯನ್ನು ಪತ್ತೆ ಹಚ್ಚಿರುವ ವಿಚಿತ್ರ ಘಟನೆ ನಡೆದಿದ್ದು, ಈ ಪ್ರಕರಣದ ತನಿಖೆ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಕ್ಕೆ ವ್ಯಾಪಿಸಿತ್ತು.
ಉತ್ತರ ಪ್ರದೇಶದ ಜೌನ್‌ಪುರ ನಿವಾಸಿ ನರೇಂದ್ರ ಕುಮಾರ್ ಶುಕ್ಲಾ ಎಂಬವರು ಜಾರ್ಖಂಡ್ ನ ಪಲಮು ಜಿಲ್ಲೆಯ ಪೊಲೀಸರಿಗೆ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು. ಜಯಮತಿ ಎಂಬ ತನ್ನ ಆನೆಯನ್ನು ಜಾರ್ಖಂಡ್ ನ ರಾಂಚಿಯಿಂದ ಜೌನ್ ಪುರಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಮಾವುತನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಶುಕ್ಲಾ ದೂಷಿಸಿದ್ದರು. ಆಗಸ್ಟ್ ನಲ್ಲಿ ಪಲಮುವಿನ ಜೋರ್ಕಟ್ ನಿಂದ ಜಯಮತಿ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.
ಈ ದೂರಿನ ಹಿನ್ನೆಲೆ ಪೊಲೀಸರು ತನಿಖೆ ನಡೆಸಿದ ವೇಳೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿತ್ತು. ಜಯಮತಿ ಆನೆಯ ಕಳ್ಳತನ ಪ್ರಕರಣವನ್ನು ಕೊನೆಗೂ ಪೊಲೀಸರು ಬಯಲಿಗೆಳೆದಿದ್ದು, ಬಿಹಾರದ ಛಾಪ್ರಾದಲ್ಲಿ ಆನೆಯನ್ನು ಪತ್ತೆಹಚ್ಚಲಾಯಿತು.
ತನ್ನ ಆನೆಯನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದ ಶುಕ್ಲಾ ಮಾತ್ರವೇ ಜಯಮತಿ ಆನೆಯ ಮಾಲಿಕನಾಗಿರಲಿಲ್ಲ. ಈತ ಸೇರಿದಂತೆ ಇತರ ಮೂವರು ಆನೆಯ ಮಾಲಿಕರಾಗಿದ್ದರು. ಇವರು ಈ ಆನೆಯನ್ನು 40 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಆದರೆ ಶುಕ್ಲಾನನ್ನು ಹೊರತುಪಡಿಸಿ ಇತರ ಮೂವರು ಸೇರಿ ಆನೆಯನ್ನು ಛಾಪ್ರಾದಲ್ಲಿರುವ ಗೋರಖ್ ಸಿಂಗ್ ಎಂಬಾತನಿಗೆ 27 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಆರಂಭದಲ್ಲಿ ಪೊಲೀಸರು ಮಾವುತನ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಮಾವುತ ಆನೆಯನ್ನು ಮಾರಾಟ ಮಾಡಲು ಯೋಜಿಸಿರಬಹುದು ಎಂದು ಊಹಿಸಿದ್ದರು. ಆದರೆ ತನಿಖೆ ನಡೆಸಿದ ನಂತರ ಈ ಪ್ರಕರಣದಲ್ಲಿ ಪಾಲುದಾರರ ನಡುವಿನ ಜಗಳ ಬಯಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD