ರೇಟ್ ಎಷ್ಟು? ಬರ್ತಿಯಾ ಅಂತ ಕೇಳಿದರು: ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆ ಯಾರು ಎಂದು ತಿಳಿದಾಗ ಬೆಚ್ಚಿಬಿದ್ದ 40 ಜನ ಬೀದಿ ಕಾಮುಕರು
ಹೈದರಾಬಾದ್: ಬಸ್ ನಿಲ್ದಾಣದಲ್ಲಿ ರಾತ್ರಿ ಒಬ್ಬಂಟಿಯಾಗಿ ನಿಂತಿದ್ದ ಮಹಿಳೆಯನ್ನು ಕಂಡು ಕಾಮುಕರು ಸುತ್ತ ನೆರೆದಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಕಾಮುಕರು ಮಹಿಳೆಯ ಸುತ್ತ ನೆರೆದು ನಿನ್ನ ರೇಟ್ ಎಷ್ಟು? ಬರ್ತೀಯಾ ಎಂದೆಲ್ಲ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಆದ್ರೆ… ಕೆಲವೇ ಕ್ಷಣಗಳಲ್ಲಿ ಆ ಮಹಿಳೆ ಯಾರು ಎನ್ನುವುದು ತಿಳಿಯುತ್ತಿದ್ದಂತೆಯೇ ಬೆಚ್ಚಿಬಿದ್ದಿದ್ದಾರೆ.
ಏನಿದು ಸ್ಟೋರಿ?
ಹೈದರಾಬಾದ್ ನ ಮಲ್ಕಾಜ್ ಗಿರಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಕೂಡಲೇ ಐಪಿಎಸ್ ಅಧಿಕಾರಿ ಸುಲತಿ ಅವರು ನಗರದ ವಾಸ್ತವ ಸ್ಥಿತಿಯನ್ನು ತಿಳಿಯಲು ಸಾಹಸಮಯ ಹೆಜ್ಜೆಯನ್ನಿಟ್ಟಿದ್ದಾರೆ. ಸಾದಾ ಉಡುಪಿನಲ್ಲಿ, ಸಾಮಾನ್ಯ ಮಹಿಳೆಯಂತೆ ಮಧ್ಯರಾತ್ರಿ ದಿಲ್ ಸುಖ್ ನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಯಾವುದೇ ಭದ್ರತೆ ಇಲ್ಲದೆ ಒಬ್ಬಂಟಿಯಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸುಲತಿ ಅವರನ್ನು ಐಪಿಎಸ್ ಅಧಿಕಾರಿ ಎಂದು ತಿಳಿಯದ ಕೆಲವು ಕಿಡಿಗೇಡಿಗಳು ಸುತ್ತುವರೆದಿದ್ದಾರೆ. “ಬರುತ್ತೀಯಾ? ನಿನ್ನ ರೇಟ್ ಎಷ್ಟು?” ಎಂದು ಅಸಭ್ಯವಾಗಿ ಪ್ರಶ್ನಿಸಿ ಪೀಡಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಆ ಪರಿಸರದಲ್ಲಿ ಅವರು ಕಳೆದರೂ, ಯಾವುದೇ ಪೆಟ್ರೋಲಿಂಗ್ ವಾಹನವಾಗಲಿ ಅಥವಾ ಪೊಲೀಸರಾಗಲಿ ಅಲ್ಲಿಗೆ ಬರದಿರುವುದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿದೆ.
ಅಲ್ಲಿ ನೆರೆದಿದ್ದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಾಗಿದ್ದು, ಅವರು ಮದ್ಯ ಮತ್ತು ಗಾಂಜಾ ಅಮಲಿನಲ್ಲಿದ್ದರು ಎಂಬುದನ್ನು ಸುಲತಿ ಅವರು ಗುರುತಿಸಿದ್ದಾರೆ. ಸುಮಾರು ಮೂರೂವರೆ ಗಂಟೆಗಳ ನಂತರ ಒಬ್ಬ ಬೀಟ್ ಕಾನ್ಸ್ಟೇಬಲ್ ಅಲ್ಲಿಗೆ ಬಂದಾಗ ಸುಲತಿ ಅವರ ಅಸಲಿ ಗುರುತು ಬಹಿರಂಗವಾಯಿತು. ಕೂಡಲೇ ಸ್ಥಳಕ್ಕೆ ಬಂದ ಎಸ್ ಐ ಅವರು ಸೆಲ್ಯೂಟ್ ಹೊಡೆದಾಗ ಕಿಡಿಗೇಡಿಗಳು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸುಮಾರು 40 ಮಂದಿ ಪೋಕರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಗೆ ಕೌನ್ಸಿಲಿಂಗ್ ನೀಡಿದ ಅಧಿಕಾರಿಗಳು, ಮದ್ಯ ಮತ್ತು ಗಾಂಜಾ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಾಚರಣೆ ನಡೆಸಲಾಗಿದ್ದು, ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























