ರಾಜಕೀಯ ಪ್ರತಿಕಾರ ತೀರಿಸಲು 4 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ!

agra.jpg
22/06/2026

ಆಗ್ರಾ: ಪಂಚಾಯತ್ ಚುನಾವಣೆ ದ್ವೇಷದ ಹಿನ್ನೆಲೆಯಲ್ಲಿ ಕುಟುಂಬವೊಂದಕ್ಕೆ ಪಾಠ ಕಲಿಸಲು 45 ವರ್ಷದ ವ್ಯಕ್ತಿಯೊಬ್ಬ ಕೇವಲ ನಾಲ್ಕು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ, ಅತ್ಯಾಚಾರ ನಡೆಸಿ, ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಜೂನ್ 6 ರಂದು ಕಸ್ಗಂಜ್ ಜಿಲ್ಲೆಯ ಗ್ರಾಮವೊಂದರಿಂದ ನಾಪತ್ತೆಯಾಗಿದ್ದ ಮಗುವಿನ ಮೃತದೇಹ ಮೂರು ದಿನಗಳ ನಂತರ (ಜೂನ್ 9) ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.

ಮಗುವಿನ ತಂದೆ ಹರಿಯಾಣದ ಫರಿದಾಬಾದ್ ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ತಾತನನ್ನು ನೋಡಲು ಇಡೀ ಕುಟುಂಬ ಜೂನ್ 6 ರಂದು ಕಸ್ಗಂಜ್ ನ ತಮ್ಮ ಸ್ವಗ್ರಾಮಕ್ಕೆ ಬಂದಿತ್ತು. ಮಗು ಮನೆಬಾಗಿಲಿನಿಂದ ಹೊರಗೆ ಹೆಜ್ಜೆ ಇಟ್ಟ ತಕ್ಷಣವೇ ಆರೋಪಿಗಳು ಅವಳನ್ನು ಅಪಹರಿಸಿದ್ದರು.

ಪೊಲೀಸ್ ತನಿಖೆಯ ಪ್ರಕಾರ, ಮುಖ್ಯ ಆರೋಪಿ ಹಾಗೂ ಸಂತ್ರಸ್ತ ಮಗುವಿನ ಕುಟುಂಬದ ನಡುವೆ 2021 ರ ಗ್ರಾಮ ಪ್ರಧಾನ ಚುನಾವಣೆಯ ಸಮಯದಿಂದಲೂ ತೀವ್ರ ರಾಜಕೀಯ ಹಗೆತನವಿತ್ತು. ಈ ಹಳೇ ವೈಷಮ್ಯವನ್ನು ತೀರಿಸಿಕೊಳ್ಳಲು ಮತ್ತು ಕುಟುಂಬಕ್ಕೆ ಪಾಠ ಕಲಿಸಲು ಆರೋಪಿಯು ಈ ಹೀನ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದರೆ ಕೃತ್ಯದ ಮಾಸ್ಟರ್ ಮೈಂಡ್ ಆಗಿರುವ ಮುಖ್ಯ ಆರೋಪಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಕಸ್ಗಂಜ್ ಎಸ್ಪಿ ಒ.ಪಿ. ಸಿಂಗ್ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕೊಲೆ (BNS 103(1)), ಸಾಕ್ಷ್ಯ ನಾಶ (BNS 238), ಅತ್ಯಾಚಾರ (BNS 65(2)) ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version