ಬಜಾಲ್ ಜಲ್ಲಿಗುಡ್ಡೆ — ಮಂಗಳಾದೇವಿ ಬಸ್ ಸಂಚಾರ ಪುನರಾರಂಭಕ್ಕೆ ಆಗ್ರಹ: ಆರ್.ಟಿ.ಓಗೆ ಮನವಿ
ಮಂಗಳೂರು: ನಗರದ ಬಜಾಲ್ ಜಲ್ಲಿಗುಡ್ಡೆಯಿಂದ ಮಂಗಳಾದೇವಿ ನಡುವೆ ಸಂಚರಿಸುತ್ತಿದ್ದ ಬಸ್ಸು ಸೌಲಭ್ಯವನ್ನು ಕೂಡಲೇ ಪುನರ್ ಪ್ರಾರಂಭಿಸುವಂತೆ ಹಾಗೂ ನಿಯಮ ಉಲ್ಲಂಘಿಸಿ ಟ್ರಿಪ್ ಕಡಿತಗೊಳಿಸುತ್ತಿರುವ ಖಾಸಗಿ ಬಸ್ಸುಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ (RTO) ಸೋಮವಾರ (ಜೂನ್ 22, 2026) ಮನವಿ ಸಲ್ಲಿಸಲಾಯಿತು. ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಸಿಪಿಐಎಂ ಜಂಟಿ ನಿಯೋಗವು ಈ ಜಂಟಿ ಮನವಿಯನ್ನು ಹಸ್ತಾಂತರಿಸಿತು.
ಬಜಾಲ್ ಜಲ್ಲಿಗುಡ್ಡೆಯಿಂದ ಮಂಗಳಾದೇವಿ ನಡುವೆ ಸಂಚರಿಸುತ್ತಿದ್ದ 11ಸಿ ರೂಟ್ ನಂಬರಿನ (ಸಂತ ಅಂತೋನಿ) 3 ಬಸ್ಸುಗಳು ಕಳೆದ ಹಲವು ತಿಂಗಳುಗಳಿಂದ ನಗರ ಸಾರಿಗೆ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ. ಇದರಿಂದಾಗಿ ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಸಾಮಾನ್ಯ ಜನರು ದೈನಂದಿನ ಪ್ರಯಾಣಕ್ಕಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸರಿಯಾದ ಬಸ್ ಸೌಲಭ್ಯವಿಲ್ಲದ ಕಾರಣ ಜನರು ಅನಿವಾರ್ಯವಾಗಿ ಆಟೋ ಹಾಗೂ ಟ್ಯಾಕ್ಸಿಗಳನ್ನು ಅವಲಂಬಿಸಬೇಕಾಗಿದ್ದು, ತಮ್ಮ ಗಳಿಕೆಯ ಬಹುಭಾಗವನ್ನು ಪ್ರಯಾಣಕ್ಕಾಗಿ ವ್ಯಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಕೂಲಿ ಕಾರ್ಮಿಕರು ಮತ್ತು ಸಣ್ಣ ಆದಾಯದ ದುಡಿಯುವ ವರ್ಗದವರು ಜಲ್ಲಿಗುಡ್ಡೆ ಕ್ರಾಸ್ನ ಮುಖ್ಯ ರಸ್ತೆಯವರೆಗೂ ಕಿಲೋಮೀಟರ್ಗಟ್ಟಲೆ ನಡೆದುಕೊಂಡೇ ಹೋಗುವ ದಯನೀಯ ಸ್ಥಿತಿ ಎದುರಾಗಿದೆ.
ಇದಲ್ಲದೆ, ಸ್ಟೇಟ್ ಬ್ಯಾಂಕ್ನಿಂದ ಜಲ್ಲಿಗುಡ್ಡೆ ನಡುವೆ ಸಂಚರಿಸುವ ರೂಟ್ ನಂಬ್ರ 11ಬಿ ಯ ಶ್ರೇಯಮಾಹಿಕ (ವಿವೇಕ), ಸಿಲಿನಾ ಹಾಗೂ ಪಿರೇರಾ (ರೇಡಿಯಂಟ್) ಹೆಸರಿನ 3 ಬಸ್ಸುಗಳು ತಮಗೆ ಇಷ್ಟಬಂದಂತೆ ಟ್ರಿಪ್ಗಳನ್ನು ಕಡಿತ ಮಾಡುತ್ತಿವೆ. ಆರ್.ಟಿ.ಓ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಓಡದೆ ಮನಸೋಇಚ್ಛೆ ವರ್ತಿಸುತ್ತಿರುವುದರಿಂದ ಪ್ರಯಾಣಿಕರ ತೊಂದರೆ ದುಪ್ಪಟ್ಟಾಗಿದೆ.
ಈ ಭಾಗದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗಳಿರುವುದರಿಂದ, ನಗರದ ವಿವಿಧೆಡೆಯಿಂದ ಅಗತ್ಯ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಮತ್ತು ಪ್ರಯಾಣಿಕರು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಕಂಗೆಟ್ಟಿದ್ದಾರೆ.
ಬೇಡಿಕೆಗಳು:
ಸ್ಥಗಿತಗೊಂಡಿರುವ 11ಸಿ ರೂಟ್ ನಂಬರಿನ ಬಸ್ ಸಂಚಾರವನ್ನು ತಕ್ಷಣವೇ ಪುನರ್ ಪ್ರಾರಂಭಿಸಬೇಕು.
ಆರ್.ಟಿ.ಓ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಟ್ರಿಪ್ ಕಟ್ ಮಾಡುತ್ತಿರುವ ಬಸ್ಸುಗಳ ವಿರುದ್ಧ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಭಾಗಕ್ಕೆ ಹೆಚ್ಚುವರಿ ಬಸ್ಸುಗಳ ಸೌಲಭ್ಯವನ್ನು ಒದಗಿಸಿಕೊಡಬೇಕು.
ನಿಯೋಗದಲ್ಲಿ ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಹಾಗೂ ಡಿವೈಎಫ್ಐ ಮುಖಂಡ ಸಂತೋಷ್ ಬಜಾಲ್, ಸಿಪಿಐಎಂ ಸ್ಥಳೀಯ ಮುಖಂಡ ಜಯಪ್ರಕಾಶ್ ಜಲ್ಲಿಗುಡ್ಡೆ, ಕಾರ್ಮಿಕ ಸಂಘಟನೆಯ ಮುಖಂಡರಾದ ಕೇಶವ ಚೌಟ, ಮೋಹನ್ ಜಲ್ಲಿಗುಡ್ಡೆ ಹಾಗೂ ಸಾಮಾಜಿಕ ಮುಂದಾಳು ಕಮಲಾಕ್ಷ ಬಜಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























