ರಬ್ಬರ್ ದರದಲ್ಲಿ ಭಾರಿ ಚೇತರಿಕೆ: ಬೆಳೆಗಾರರಲ್ಲಿ ಚಿಗುರಿದ ಹೊಸ ಭರವಸೆ, ಮಳೆಗಾಲದ ಟ್ಯಾಪಿಂಗ್‌ ಗೆ ಸಿದ್ಧತೆ!

rubber taping
09/06/2026

ಬೆಳ್ತಂಗಡಿ: ದೀರ್ಘಕಾಲದ ಮಂದಗತಿಯ ಬಳಿಕ ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ರಬ್ಬರ್ ಧಾರಣೆಯಲ್ಲಿ ಭಾರಿ ಚೇತರಿಕೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿರುವುದು ರಬ್ಬರ್ ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮತ್ತು ಉತ್ಸಾಹವನ್ನು ಹುಟ್ಟುಹಾಕಿದೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ, ಮಳೆಗಾಲದಲ್ಲೂ ಟ್ಯಾಪಿಂಗ್ ಕಾರ್ಯಾಚರಣೆ ಮುಂದುವರಿಸಲು ಕೃಷಿಕರು ಸಜ್ಜಾಗುತ್ತಿದ್ದು, ಮರಗಳಿಗೆ ಪ್ಲಾಸ್ಟಿಕ್ ಹೊದಿಕೆ (ರೈನ್‌ಗಾರ್ಡ್) ಅಳವಡಿಸುವಲ್ಲಿ ನಿರತರಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ರಬ್ಬರ್ ಮಾರುಕಟ್ಟೆ ತೀವ್ರ ಕುಸಿತ ಕಂಡಿತ್ತು. ಪ್ರತಿ ಕೆಜಿ ರಬ್ಬರ್ ಉತ್ಪಾದನೆಗೆ ಸುಮಾರು 190 ರೂ. ವೆಚ್ಚವಾಗುತ್ತಿದ್ದರೆ, ಮಾರುಕಟ್ಟೆಯಲ್ಲಿ ಧಾರಣೆ ಮಾತ್ರ ಕೇವಲ 140 ರೂ.ಗಳಿಗೆ ಕುಸಿದಿತ್ತು. ಇದರಿಂದಾಗಿ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿತ್ತು. ಈ ಕಷ್ಟದ ಪರಿಸ್ಥಿತಿಯಿಂದ ಕಂಗೆಟ್ಟಿದ್ದ ಹಲವು ರೈತರು ರಬ್ಬರ್ ಮರಗಳನ್ನು ಕಡಿದು, ಪರ್ಯಾಯವಾಗಿ ಅಡಿಕೆ ಗಿಡಗಳನ್ನು ನೆಡಲು ಮುಂದಾಗಿದ್ದರು.

ಆದರೆ ಪ್ರಸ್ತುತ ಮಾರುಕಟ್ಟೆ ಚಿತ್ರಣ ಸಂಪೂರ್ಣ ಬದಲಾಗಿದ್ದು, ಪ್ರತಿ ಕೆಜಿಗೆ 250 ರೂ. ನಿಂದ 280 ರೂ. ವರೆಗೆ ಉತ್ತಮ ಧಾರಣೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಕರಾವಳಿಯುದ್ದಕ್ಕೂ ಮಳೆಗಾಲದ ಟ್ಯಾಪಿಂಗ್ ಆರಂಭವಾಗಲಿದ್ದು, ಜುಲೈ ವೇಳೆಗೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ರಬ್ಬರ್ ಪೂರೈಕೆಯಾಗುವ ನಿರೀಕ್ಷೆಯಿದೆ.

ಪ್ರಸ್ತುತ ರಬ್ಬರ್ ಮಾರುಕಟ್ಟೆ ದರ ವಿವರ (ಪ್ರತಿ ಕೆಜಿಗೆ):

  • ಮಾರುಕಟ್ಟೆಯಲ್ಲಿ ವಿವಿಧ ಗ್ರೇಡ್‌ ಗಳ ರಬ್ಬರ್‌ ಗೆ ಲಭ್ಯವಿರುವ ಪ್ರಸ್ತುತ ದರಗಳ ವಿವರ ಹೀಗಿದೆ:
  • ಗ್ರೇಡ್ 1ಗಿ: 282 ರೂ.
  • ಗ್ರೇಡ್ 3: 260 ರೂ.
  • ಗ್ರೇಡ್ 4: 259.50 ರೂ.
  • ಗ್ರೇಡ್ 5: 252.50 ರೂ.
  • ಲಾಟ್ (Lot): 218 ರೂ.
  • ಎಸ್-1 (S-1): 152 ರೂ.
  • ಎಸ್-2 (S-2): 144 ರೂ.

ಒಟ್ಟಾರೆಯಾಗಿ, ದೀರ್ಘಕಾಲದ ನಷ್ಟದ ಭೀತಿಯಲ್ಲಿದ್ದ ಕರಾವಳಿಯ ರಬ್ಬರ್ ಬೆಳೆಗಾರರ ಪಾಲಿಗೆ ಈ ದರ ಏರಿಕೆಯು ಸಂಜೀವಿನಿಯಂತಾಗಿದ್ದು, ಮಾರುಕಟ್ಟೆಯಲ್ಲಿ ಮತ್ತೆ ರಬ್ಬರ್ ಸದ್ದು ಮಾಡಲಾರಂಭಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version