ದುರಂತ: ಮಗನ ಸಾವಿನ ಸುದ್ದಿ ಕೇಳಿ ಆಘಾತದಿಂದ ತಾಯಿಯೂ ನಿಧನ!

mother
09/06/2026

ಸುಳ್ಯ: ಮಗನ ಅಕಾಲಿಕ ನಿಧನದ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾದ ತಾಯಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ ತಾಲೂಕಿನ ಮುಪ್ಪೇರ್ಯ ಗ್ರಾಮದ ಟಪ್ಪಾಲುಕಟ್ಟೆಯಲ್ಲಿ ಸಂಭವಿಸಿದೆ.

ಟಪ್ಪಾಲುಕಟ್ಟೆಯ ದಿವಂಗತ ನಾರಾಯಣ ನಾಯ್ಕರ ಪತ್ನಿ ಗಿರಿಜಾ (75) ಮೃತಪಟ್ಟ ದುರ್ದೈವಿ ತಾಯಿ. ಇವರ ಪುತ್ರ ಪರಮೇಶ್ವರ ನಾಯ್ಕ (43) ಅವರು ಇತ್ತೀಚೆಗೆ ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 6ರಂದು ಪರಮೇಶ್ವರ ನಾಯ್ಕ ಕೊನೆಯುಸಿರೆಳೆದಿದ್ದರು.

ಪರಮೇಶ್ವರ ನಾಯ್ಕರ ಮೃತದೇಹವನ್ನು ಮಂಗಳೂರಿನಿಂದ ಟಪ್ಪಾಲುಕಟ್ಟೆಯ ಸ್ವಗೃಹಕ್ಕೆ ತಂದಾಗ, ಮಗ ಇನ್ನಿಲ್ಲ ಎಂಬ ಕಹಿ ಸತ್ಯ ತಿಳಿದ ತಾಯಿ ಗಿರಿಜಾ ಅವರಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ತೀವ್ರ ಆಘಾತದಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಅಯ್ಯನಕಟ್ಟೆ ಕ್ಲಿನಿಕ್‌ ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ತದನಂತರ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಒಂದೇ ದಿನ ತಾಯಿ–ಮಗ ಇಬ್ಬರನ್ನೂ ಕಳೆದುಕೊಂಡು ಕಂಗಾಲಾಗಿದ್ದ ಕುಟುಂಬಸ್ಥರಿಗೆ ಮತ್ತಷ್ಟು ಆಘಾತವಾಗದಿರಲಿ ಎಂಬ ಕಾರಣಕ್ಕೆ ಗಿರಿಜಾ ಅವರ ಮೃತದೇಹವನ್ನು ಸುಳ್ಯದ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಮೃತರ ಅಳಿಯ ಗಣೇಶ್ ಅವರು ಲಡಾಖ್‌ ನಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಊರಿಗೆ ಆಗಮಿಸುವುದು ಬಾಕಿ ಇತ್ತು.

ಜೂನ್ 8ರಂದು ಅಳಿಯ ಗಣೇಶ್ ಅವರು ಊರಿಗೆ ತಲುಪಿದ ಬಳಿಕ, ಗಿರಿಜಾ ಅವರ ಮೃತದೇಹವನ್ನು ಮನೆಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತ ಗಿರಿಜಾ ಅವರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಒಂದೇ ಮನೆಯಲ್ಲಿ ಬೆನ್ನಬೆನ್ನಿಗೆ ನಡೆದ ಎರಡು ಸಾವುಗಳು ಇಡೀ ಮುಪ್ಪೇರ್ಯ ಗ್ರಾಮವನ್ನೇ ಕಣ್ಣೀರಿಡುವಂತೆ ಮಾಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version