ಪತ್ನಿ ನಿದ್ದೆಯಲ್ಲಿದ್ದಾಗ ಆಕೆಯ ಪಾದ ಮುಟ್ಟಿ ನಮಸ್ಕರಿಸುತ್ತೇನೆ: ಬಿಜೆಪಿ ಸಂಸದ ರವಿ ಕಿಶನ್
ಹೊಸದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಭೋಜ್‌ಪುರಿ ನಟ ಮತ್ತು ಗೋರಖ್‌ಪುರದ ಬಿಜೆಪಿ ಸಂಸದ ರವಿ ಕಿಶನ್ ತಮ್ಮ ಪತ್ನಿಯ ಬಗ್ಗೆ ಆಡಿದ ಮಾತುಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ.
ಸದನದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದ ರವಿ ಕಿಶನ್, ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡಲೇಬೇಕು ಎಂದು ಪ್ರತಿಪಾದಿಸಿದರು. ಈ ಸಮಯದಲ್ಲಿ ಸಭಾಪತಿ ಸ್ಥಾನದಲ್ಲಿದ್ದ ಜಗದಂಬಿಕಾ ಪಾಲ್ ಅವರು ತಮಾಷೆಯಾಗಿ, “ಯಾಕೆ, ನಿಮ್ಮ ಪತ್ನಿ ಕೂಡ ನಿಮಗಾಗಿ ಮತ ಕೇಳಲು ಪ್ರಚಾರ ಮಾಡುತ್ತಾರಲ್ಲವೇ?” ಎಂದು ಪ್ರಶ್ನಿಸಿದರು.
ಇದಕ್ಕೆ ಅತ್ಯಂತ ಗೌರವದಿಂದ ಉತ್ತರಿಸಿದ ರವಿ ಕಿಶನ್, “ಹೌದು, ನನ್ನ ಪತ್ನಿ ಚುನಾವಣೆಯ ಸಮಯದಲ್ಲಿ ನನಗಾಗಿ ಸಕ್ರಿಯವಾಗಿ ಪ್ರಚಾರ ಮಾಡುತ್ತಾರೆ. ಅವರು ನನಗೆ ಸುಮಾರು 1 ಲಕ್ಷದಿಂದ 1.5 ಲಕ್ಷದಷ್ಟು ಮತಗಳನ್ನು ತಂದುಕೊಡುತ್ತಾರೆ. ಹಾಗಾಗಿ ನಾನು ಅವಳ ಪಾದ ಮುಟ್ಟಿ ನಮಸ್ಕರಿಸುತ್ತೇನೆ” ಎಂದರು.
ಇದನ್ನು ಕೇಳಿ ಆಶ್ಚರ್ಯಚಕಿತರಾದ ಜಗದಂಬಿಕಾ ಪಾಲ್, “ನಿಜವಾಗಿಯೂ ನೀವು ಪತ್ನಿಯ ಪಾದ ಮುಟ್ಟುತ್ತೀರಾ?” ಎಂದು ಮರುಪ್ರಶ್ನಿಸಿದರು. ಆಗ ರವಿ ಕಿಶನ್, “ನಾನು ಪಾದ ಮುಟ್ಟಲು ಹೋದರೆ ಆಕೆ ಬಿಡುವುದಿಲ್ಲ. ಹಾಗಾಗಿ ಆಕೆ ಗಾಢ ನಿದ್ರೆಯಲ್ಲಿದ್ದಾಗ ನಾನು ಗುಟ್ಟಾಗಿ ಅವಳ ಪಾದ ಮುಟ್ಟಿ ನಮಸ್ಕರಿಸುತ್ತೇನೆ” ಎಂದು ಹೇಳಿ ಎಲ್ಲರನ್ನೂ ನಗಿಸಿದರು.
ತಮ್ಮ ಯಶಸ್ಸಿನ ಹಿಂದೆ ಪತ್ನಿಯ ಪಾತ್ರದ ಬಗ್ಗೆ ಮಾತನಾಡಿದ ಅವರು, “ನನ್ನ ಸಿನಿಮಾ ಜೀವನದ ಅತ್ಯಂತ ಕಷ್ಟದ ದಿನಗಳಲ್ಲಿ, ನಾನು ಸೋತು ಸುಣ್ಣವಾಗಿದ್ದಾಗ ನನ್ನ ಪತ್ನಿ ನನ್ನ ಜೊತೆ ಗಟ್ಟಿಯಾಗಿ ನಿಂತಿದ್ದರು. ಇಷ್ಟೆಲ್ಲಾ ಮಾಡಿದ ಆಕೆಗೆ ನಾನು ಯಾಕೆ ಗೌರವ ಕೊಡಬಾರದು?” ಎಂದು ಭಾವುಕರಾಗಿ ನುಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























