ನನಗೆ ಕಾಣೆ, ಅಂಜಲ್, ಭೂತಾಯಿ ಮೀನೆಂದರೆ ಇಷ್ಟ: ಬೈಂದೂರಿನಲ್ಲಿ ನಟ ಶಿವರಾಜ್ ಕುಮಾರ್

shivaraj kumar
21/03/2024

ಉಡುಪಿ: ಕಾಣೆ, ಅಂಜಲ್, ಭೂತಾಯಿ ಮೀನೆಂದರೆ ನನಗೆ ಇಷ್ಟ. ಅದೇ ರೀತಿ ಇಲ್ಲಿನ ಜನರ ಬಗ್ಗೆಯೂ ವಿಶೇಷ ಪ್ರೀತಿ ಇದೆ ಎಂದು  ಸ್ಯಾಂಡಲ್ ವುಡ್ ಸ್ಟಾರ್ ನಟ ಶಿವರಾಜ್ ಕುಮಾರ್ ಹೇಳಿದರು.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ  ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾವಳಿಯ ವಿಶೇಷತೆಗಳನ್ನು ನೆನಪಿಸಿಕೊಂಡರು.

ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಇದಕ್ಕೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಗಿಂತ ಬೇರೆ ಉದಾಹರಣೆ ಬೇಕಾ? ನನ್ನ ಪತ್ನಿ ಗೀತಾ ಶಕ್ತಿಧಾಮ ನಿರ್ವಹಣೆ ಮಾಡುತ್ತಿದ್ದಾರೆ. ಆಕೆಗೆ ಸೇವಾ ಅನುಭವ ಇದೆ. ಚುನಾವಣೆಯಲ್ಲಿ ಜನರ ಆಶೀರ್ವಾದಕ್ಕಾಗಿ ಬಂದಿದ್ದೇವೆ ಎಂದು ಇದೇ ವೇಳೆ ಶಿವರಾಜ್ ಕುಮಾರ್ ಹೇಳಿದರು.

ಉಡುಪಿ ಶಿವಮೊಗ್ಗ ಜೊತೆ ನಮಗೆ ಬಹಳ ನಂಟಿದೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರ ಇಲ್ಲೇ ಶೂಟಿಂಗ್ ಆಗಿತ್ತು. ಅಪ್ಪಾಜಿ (ಡಾ.ರಾಜ್ ಕುಮಾರ್) ಬಿಟ್ರೆ ನಾನು ಹೆಚ್ಚು ಶೂಟಿಂಗ್ ಕರಾವಳಿಯಲ್ಲಿ ಮಾಡಿದ್ದೇನೆ. ಎರಡನೇ ಸಲ ಬೈಂದೂರಿಗೆ ಬರುತ್ತಿದ್ದೇವೆ. ಖಂಡಿತಾ ಒಳ್ಳೆ ಕೆಲಸ ಮಾಡುತ್ತೇವೆ. ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.

ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ಕಣಕ್ಕಿಳಿಸಿದೆ. ಪತ್ನಿ ಪರ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಪ್ರಚಾರಕ್ಕೆ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version