7:00 AM Saturday 20 - December 2025

ಅನ್ಯಕೋಮಿನ ಪ್ರೇಮಿಗಳು ಎಂದು ಭಾವಿಸಿ ಅಕ್ಕ-ತಮ್ಮನ ಮೇಲೆ ಅನೈತಿಕ ಪೊಲೀಸ್ ಗಿರಿ

belagavi
07/01/2024

ಬೆಳಗಾವಿ:  ಅನ್ಯಕೋಮಿನ ಯುವತಿ-ಯುವಕ ಎಂದು ಭಾವಿಸಿ ಅಕ್ಕ-ತಮ್ಮನ ಮೇಲೆ ಯುವಕರ ಗುಂಪೊಂದು ಅನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಕೋಟೆ ಕೆರೆಯಿಂದ ವರದಿಯಾಗಿದೆ.

24 ವರ್ಷದ ಯುವತಿ ಹಾಗೂ 21 ವರ್ಷದ ಯುವಕ ಅನೈತಿಕ ಪೊಲೀಸ್ ಗಿರಿಗೆ ಗುರಿಯಾದವರಾಗಿದ್ದಾರೆ.  ಇವರು ಯುವ ನಿಧಿಗಾಗಿ ಅರ್ಜಿ ಸಲ್ಲಿಸಲು  ಆಗಮಿಸಿದ್ದರು.

ಯುವತಿ ಶಿರವಸ್ತ್ರ ರೀತಿಯಲ್ಲಿ ಬಟ್ಟಿಯನ್ನು ಹಾಕಿಕೊಂಡಿದ್ದರಿಂದಾಗಿ ಆಕೆ ಮುಸ್ಲಿಮ್ ಯುವತಿ ಮತ್ತು ಹಿಂದೂ ಯುವಕ ಪ್ರೇಮಿಗಳು ಎಂದು ಭಾವಿಸಿದ ಕಿಡಿಗೇಡಿಗಳ ಗುಂಪೊಂದು  ಇವರಿಬ್ಬರ ಮೇಲೆ ಹಲ್ಲೆ ನಡೆಸಿ ಬಳಿಕ ಕೊಠಡಿಯೊಂದರಲ್ಲಿ ಕೂಡಿ ಹಾಕಿದೆ, ಜೊತೆಗೆ ಇವರ ಮೊಬೈಲ್ ಕೂಡ ಕಸಿದುಕೊಂಡಿದ್ದರು ಎನ್ನಲಾಗಿದೆ.

ಈ ನಡುವೆ ಯುವತಿ ಉಪಾಯದಿಂದ ತನ್ನ ಪೋಷಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ವಾಟ್ಸಾಪ್ ಲೊಕೇಶನ್ ಶೇರ್ ಮಾಡಿದ್ದಾಳೆ.  ಲೊಕೇಷನ್ ಹುಡುಕಿಕೊಂಡು ಬಂದ ಪೋಷಕರು ಇಬ್ಬರನ್ನು  ರಕ್ಷಣೆ ಮಾಡಿದ್ದಾರೆ. ಪೋಷಕರು ಆಗಮಿಸುತ್ತಿದ್ದಂತೆಯೇ ಪುಂಡರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಭಾಗಿಯಾಗಿದ್ದ 16  ಪುಂಡರ ಪೈಕಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಪುಂಡರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಸಹೋದರ ಸಹೋದರಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ

Exit mobile version