ಮಾರ್ನೆಮಿ ವೇಷಧಾರಿಯ ಮೇಲೆ ಅನೈತಿಕ ಪೊಲೀಸ್ ಗಿರಿ!

marnemi
23/10/2023

ದಕ್ಷಿಣ ಕನ್ನಡ: ಮಾರ್ನೆಮಿ(ಮಹಾನವಮಿ) ಬಂತೆಂದರೆ ಸಾಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ವೇಷಗಳು ಮನೆ ಬಾಗಿಲಿಗೆ ಬಂದು ತಮ್ಮ ಕಲೆಗಳನ್ನು ಪ್ರದರ್ಶಿಸಿ, ಸಾರ್ವಜನಿಕರು ನೀಡುವ ಕಾಣಿಕೆಯನ್ನು ಸ್ವೀಕರಿಸುವುದು ವಾಡಿಕೆ. ಹುಲಿವೇಷ, ಕರಡಿ ವೇಷಗಳು, ಸಿಂಹ ವೇಷಗಳು ಮಾತ್ರವಲ್ಲದೇ ಏಕ ಪಾತ್ರಧಾರಿಗಳು ಪ್ರೇತ, ಯಕ್ಷಗಾನದ ಪಾತ್ರಗಳು ಸೇರಿದಂತೆ ತಮಗೆ ಇರುವ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಆದ್ರೆ ಈ ಬಾರಿ ಬಡ ವೇಷಧಾರಿಯೊಬ್ಬ ಯಕ್ಷಗಾನದ ಪಾತ್ರದ ವೇಷ ಧರಿಸಿದ್ದಕ್ಕೆ ಆತನ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.

ಹಿರಿಯ ಕಲಾವಿದ ಎನ್ನಲಾಗಿರುವ  ಅಶೋಕ್ ಶೆಟ್ಟಿ ಸರಪಾಡಿ ಎಂಬ ವ್ಯಕ್ತಿ, ಯಕ್ಷಗಾನದ ವೇಷ ಧರಿಸಿದ್ದ ಬಡ ವೇಷಧಾರಿಯನ್ನು ತಡೆದು ವೇಷವನ್ನು ಕಳಚಲು ಹೇಳಿದ್ದು, ಬೆದರಿಸಿ ಅವಾಚ್ಯವಾಗಿ ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ದಾವಣಗೆರೆ ಮೂಲದ ವ್ಯಕ್ತಿ ಎಂದು ಹೇಳಲಾಗಿರುವ ಈ ವ್ಯಕ್ತಿ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಮಂದಿರದ ಬಳಿ ಯಕ್ಷಗಾನದ ವೇಷ ಹಾಕಿ ಹೋಗುತ್ತಿದ್ದ. ಇದೇ ವೇಳೆ ಆಗಮಿಸಿದ ಕಲಾವಿದ ಅಶೋಕ್ ‌ಶೆಟ್ಟಿ ಸರಪಾಡಿ ಅವರು ಯಕ್ಷಗಾನದ ವೇಷ ಹಾಕುವಂತಿಲ್ಲ. ಅದನ್ನು ತೆಗೆಯುವಂತೆ ಬೆದರಿಸುತ್ತಿರುವ ಬಗ್ಗೆ ವಿಡಿಯೋದಲ್ಲಿ ಕಂಡು ಬಂದಿದೆ.

ಯಕ್ಷಗಾನವನ್ನು ನಾವು ಇಲ್ಲಿ ಪೂಜೆ ಮಾಡುತ್ತೇವೆ. ನಿನಗೆ ಗೊತ್ತುಂಟಾ..? ನೀನು ವೇಷ ಹಾಕಿ ಭಿಕ್ಷೆ ಬೇಡುತ್ತಿಯಾ ಎಂದು ಪ್ರಶ್ನಿಸಿದ್ದಾರೆ. ನಾನು ತಪ್ಪು ಮಾಡಿದ್ದರೆ ನನಗೆ ಹೊಡೆಯಿರಿ ಎಂದು ವೇಷಧಾರಿ ಅವಮಾನದಿಂದ ನೊಂದು ಅಂಗಲಾಚುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು,  ವಿಡಿಯೋ ಇದೀಗ ವೈರಲ್ ಆಗಿದೆ.

ಬಡವರು ವೇಷ ಧರಿಸಿದರೆ ತಪ್ಪೇನು?

ಕಲೆ ಯಾರೊಬ್ಬರ ಸೊತ್ತಲ್ಲ, ಆ ಕಲೆಯನ್ನು ಒಬ್ಬ ಭಿಕ್ಷುಕ ಧರಿಸಿದರೂ ಅದರ ಬೆಲೆ ಕುಗ್ಗಲ್ಲ. ಆದ್ರೆ ಕಲೆ ಇಂತಹವರಿಗೆ ಮಾತ್ರ ಸೀಮಿತ ಎನ್ನುವ ಮನಸ್ಥಿತಿ ಮುಂದೆ ಅಸ್ಪೃಷ್ಯತೆಯ ಪೋಷಣೆಗೆ ಕಾರಣವಾಗುತ್ತದೆ. ಇದು ಸಾಮಾಜಿಕ ಪಿಡುಗಾಗಿ ದೊಡ್ಡಮಟ್ಟಕ್ಕೆ ಏರುವ ಮೊದಲೇ ಸರ್ಕಾರ, ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು.

ಬಡವರು ವೇಷ ಧರಿಸಿದ ತಕ್ಷಣವೇ ಯಕ್ಷಗಾನ ಕಲೆಗೆ ಅವಮಾನವೇ? ಎಷ್ಟೋ ಬಡ ಪ್ರೇಕ್ಷಕರೇ ಇಂದಿಗೂ ಯಕ್ಷಗಾನದ ಪೋಷಕರಾಗಿದ್ದಾರೆ. ಯಾರು ಯಕ್ಷಗಾನವನ್ನು ಹೇಗೆ ಆರಾಧಿಸುತ್ತಾರೋ, ಅದೇ ರೀತಿಯಲ್ಲಿ ಆರಾಧಿಸಲಿ, ಇನ್ನೊಬ್ಬರ ಮೇಲೆ ನೀನು ಇಂತಹ ವೇಷ ಹಾಕಬಾರದು ಎಂದು ನಿಯಮ ಹೇರಲು ಕಾನೂನಿನಲ್ಲಿ ಅವಕಾಶವಿದೆಯೇ? ನಡು ರಸ್ತೆಯಲ್ಲಿ ಒಬ್ಬ ವೇಷಧಾರಿಯನ್ನು ತಡೆದು ಅವಮಾನಿಸುವುದರಿಂದ ಯಾರು ಕೂಡ ದೊಡ್ಡ ಕಲಾವಿದರಾಗಲು ಸಾಧ್ಯವೇ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸುವ ಮೂಲಕ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.

ವಿಡಿಯೋ ನೋಡಿ:

 

ಇತ್ತೀಚಿನ ಸುದ್ದಿ

Exit mobile version