ಇಸ್ರೇಲ್-ಹಮಾಸ್ ಯುದ್ಧ: ಫೆಲೆಸ್ತೀನ್ ಗೆ ಎರಡನೇ ಬ್ಯಾಚ್ ನೆರವು ಕಳುಹಿಸಿದ ಭಾರತ

19/11/2023

ಭಾರತವು ಭಾನುವಾರ ಫೆಲೆಸ್ತೀನ್ ಗೆ ಎರಡನೇ ಬಾರಿ ನೆರವನ್ನು ಕಳುಹಿಸಿದೆ. ಈ ಬೆಳವಣಿಗೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ದೃಢಪಡಿಸಿದ್ದು, “ನಾವು ಫೆಲೆಸ್ತೀನ್ ಜನರಿಗೆ ಮಾನವೀಯ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.

“ಭಾರತೀಯ ವಾಯುಪಡೆಯ ಎರಡನೇ ಸಿ 17 ವಿಮಾನವು 32 ಟನ್ ಸಹಾಯವನ್ನು ಹೊತ್ತು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ.

ಭಾರತವು ಅಕ್ಟೋಬರ್ 22 ರಂದು ಫೆಲೆಸ್ತೀನ್ ಗೆ ವೈದ್ಯಕೀಯ ಮತ್ತು ವಿಪತ್ತು ಪರಿಹಾರ ಸೇರಿದಂತೆ ಮೊದಲ ನೆರವನ್ನು ಕಳುಹಿಸಿತ್ತು. ಎಲ್-ಅರಿಶ್ ವಿಮಾನ ನಿಲ್ದಾಣವು ಗಾಜಾ ಪಟ್ಟಿಯೊಂದಿಗಿನ ಈಜಿಪ್ಟ್ ನ ಗಡಿಯಲ್ಲಿರುವ ರಾಫಾ ಕ್ರಾಸಿಂಗ್ ನಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿದೆ.

ರಫಾ ಪ್ರಸ್ತುತ ಗಾಝಾಕ್ಕೆ ಮಾನವೀಯ ನೆರವು ನೀಡುವ ಏಕೈಕ ಕ್ರಾಸಿಂಗ್ ಪಾಯಿಂಟ್ ಆಗಿದೆ. ಆದಾಗ್ಯೂ, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಪ್ರಾರಂಭವಾದಾಗಿನಿಂದ ಗಡಿ ದಾಟುವಿಕೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಬಂಡುಕೋರರ ಗುಂಪು ನಡೆಸಿದ ದಾಳಿಯಲ್ಲಿ ಅದರ ಹೋರಾಟಗಾರರು 1,200 ಜನರನ್ನು ಕೊಂದು 240 ಒತ್ತೆಯಾಳುಗಳನ್ನು ತೆಗೆದುಕೊಂಡ ನಂತರ ಹಮಾಸ್ ಅನ್ನು ನಾಶಪಡಿಸುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು.
ಯುದ್ಧ ಸಂಘರ್ಷವು ಏಳನೇ ವಾರವನ್ನು ಪ್ರವೇಶಿಸುತ್ತಿದ್ದಂತೆ, ಯುದ್ಧದಲ್ಲಿ 5,000 ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆಯು 12,300 ಕ್ಕೆ ಏರಿಕೆಯಾಗಿದೆ.

ಎರಡು ಶಾಲೆಗಳಲ್ಲಿ ಆಶ್ರಯ ಪಡೆದಿರುವ ನಾಗರಿಕರು ಸೇರಿದಂತೆ ಡಜನ್‌ಗಟ್ಟಲೆ ಫೆಲೆಸ್ತೀನೀಯರು ವಾಯು ದಾಳಿಯಲ್ಲಿ ಸಾವನ್ನಪ್ಪಿದ ನಂತರ ಹಮಾಸ್ ಬಂಡುಕೋರರ ವಿರುದ್ಧದ ತನ್ನ ದಾಳಿಯನ್ನು ದಕ್ಷಿಣ ಗಾಝಾಕ್ಕೆ ವಿಸ್ತರಿಸಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಇಸ್ರೇಲ್ ಹೇಳಿದೆ.

ಇತ್ತೀಚಿನ ಸುದ್ದಿ

Exit mobile version