ಐಸಿಸಿ ಏಕದಿನ ವಿಶ್ವಕಪ್: ನೆದರ್ಲೆಂಡ್ಸ್ ವಿರುದ್ಧ ಭಾರತಕ್ಕೆ 160 ರನ್ ಗಳ ಜಯ

12/11/2023

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ 45 ನೇ ಪಂದ್ಯದಲ್ಲಿ ಭಾರತವು ನೆದರ್ಲ್ಯಾಂಡ್ಸ್ ತಂಡವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತು.

ಶ್ರೇಯಸ್ ಅಯ್ಯರ್ ಅಜೇಯ 128 ಮತ್ತು ರಾಹುಲ್ 102 ರನ್ ಗಳಿಸಿದರು. ಅಂತಿಮವಾಗಿ ನೆದರ್ಲೆಂಡ್ಸ್ 47.5 ಓವರ್ ಗಳಲ್ಲಿ 250 ರನ್ ಗಳಿಗೆ ಆಲೌಟ್ ಆಯಿತು. ತೇಜ ನಿಡಮನೂರು 54 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರು. ಈ ಗೆಲುವು ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾರತದ ಸ್ಥಾನವನ್ನು ಬಲಪಡಿಸಿತು, ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿತು.

411 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ನೆದರ್ಲೆಂಡ್ಸ್​ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ವೆಸ್ಲಿ ಬ್ಯಾರೆಸಿ ಕೇವಲ 4 ರನ್​ಗಳಿಗೆ ಪೆವಲಿಯನ್ ಸೇರಿಕೊಂಡರು. ನಂತರ ಮ್ಯಾಕ್ಸ್ ಒ’ಡೌಡ್ (30 ರನ್) ಹಾಗೂ ಕಾಲಿನ್ ಅಕರ್ಮನ್ (35 ರನ್) 61 ರನ್​ಗಳ ಜೊತೆಯಾಟ ಹಂಚಿಕೊಂಡರು. ಆದರೆ ಇವರಿಬ್ಬರಿಗೂ ಬೃಹತ್ ಜೊತೆಯಾಟ ಕಟ್ಟಲು ಸಾಧ್ಯವಾಗಲಿಲ್ಲ. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಕೂಡ 45 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಕೆಳಕ್ರಮಾಂಕದಲ್ಲಿ ತೇಜ ನಿಡಮನೂರು ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಕೊಂಚ ಹೋರಾಟ ನೀಡಿದರು.

ಉಳಿದಂತೆ ತಂಡದ ಯಾವ ಬ್ಯಾಟರ್​ಗಳಿಗೂ​ ಕೂಡ ಭಾರತದ ಬೌಲಿಂಗ್ ದಾಳಿ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ಭಾರತದ ಪರ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ತಲಾ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 9 ಬೌಲರ್​ಗಳನ್ನು ದಾಳಿಗಿಳಿಸಿದ್ದು ವಿಶೇಷವಾಗಿತ್ತು.

ಇದು ಈ ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಸತತ 9ನೇ ಗೆಲುವಾಗಿದ್ದು, ಈ ಗೆಲುವಿನೊಂದಿಗೆ ಭಾರತ ಒಂದು ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸತತ ಗೆಲುವುಗಳನ್ನು ಪಡೆದ ಎರಡನೇ ತಂಡ ಎನಿಸಿಕೊಂಡಿದೆ. ಸತತ 11 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಇತ್ತೀಚಿನ ಸುದ್ದಿ

Exit mobile version