ಭಾರತ ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲಿದೆ: ವಿಶ್ವದಲ್ಲೇ ಭಾರತ ಬೆಳವಣಿಗೆಯ ಎಂಜಿನ್ ಆಗಲಿದೆ ಎಂದ ಪ್ರಧಾನಿ ಮೋದಿ

pm modi
23/08/2023

ಭಾರತವು ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲಿದೆ. ಅಲ್ಲದೇ ಮುಂಬರುವ ವರ್ಷಗಳಲ್ಲಿ ವಿಶ್ವದಲ್ಲಿ ಬೆಳವಣಿಗೆಯ ಎಂಜಿನ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂ ನಾಯಕರ ಸಂವಾದವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.

ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಮತ್ತು ಸಭೆಯನ್ನು ಆಯೋಜಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು. “ಬ್ರಿಕ್ಸ್ ವಾಣಿಜ್ಯ ಮಂಡಳಿಯ 10ನೇ ವಾರ್ಷಿಕೋತ್ಸವಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಕಳೆದ 10 ವರ್ಷಗಳಲ್ಲಿ, ಬ್ರಿಕ್ಸ್ ವ್ಯಾಪಾರ ಮಂಡಳಿ ನಮ್ಮ ಆರ್ಥಿಕ ಸಹಕಾರವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಬ್ರಿಕ್ಸ್ 2009 ರಲ್ಲಿ ಮೊದಲ ಬಾರಿಗೆ ನಡೆದಾಗ ವಿಶ್ವ ಆರ್ಥಿಕತೆಗೆ ಭರವಸೆಯ ಕಿರಣವಾಗಿ ಮೂಡಿಬಂತು. “2009 ರಲ್ಲಿ ಮೊದಲ ಬ್ರಿಕ್ಸ್ ಶೃಂಗಸಭೆ ನಡೆದಾಗ ಜಗತ್ತು ಭಾರೀ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುತ್ತಿತ್ತು. ಆ ಸಮಯದಲ್ಲಿ ಬ್ರಿಕ್ಸ್ ಜಾಗತಿಕ ಆರ್ಥಿಕತೆಗೆ ಭರವಸೆಯ ಕಿರಣವಾಗಿ ಹೊರಹೊಮ್ಮಿತು. ಪ್ರಸ್ತುತ ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ, ಉದ್ವಿಗ್ನತೆ ಮತ್ತು ವಿವಾದಗಳ ನಡುವೆ ಜಗತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಮತ್ತೊಮ್ಮೆ ಬ್ರಿಕ್ಸ್ ಪಾತ್ರ ಮುಖ್ಯವಾಗಿದೆ” ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version