ದೇಶದ ಅತಿದೊಡ್ಡ ದರೋಡೆ: ಬೆಳಗಾವಿ ಗಡಿಯಲ್ಲಿ 400 ಕೋಟಿ ರೂ. ಹಣವಿದ್ದ ಎರಡು ಕಂಟೇನರ್ ಹೈಜಾಕ್!

400 crore hijacked case
25/01/2026

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ದೇಶವೇ ಬೆಚ್ಚಿಬೀಳುವಂತಹ ಅತಿದೊಡ್ಡ ದರೋಡೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಸುಮಾರು 400 ಕೋಟಿ ರೂಪಾಯಿ ನಗದು ಹೊಂದಿದ್ದ ಎರಡು ಕಂಟೇನರ್‌ಗಳನ್ನು ಬೆಳಗಾವಿ ಗಡಿಯ ಚೋರ್ಲಾ ಘಾಟ್ ಪ್ರದೇಶದಲ್ಲಿ ಹೈಜಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ವಿವರ: ಈ ಬೃಹತ್ ದರೋಡೆ ಪ್ರಕರಣವು 2025ರ ಅಕ್ಟೋಬರ್ 16ರಂದೇ ನಡೆದಿದ್ದು, ದರೋಡೆಯಾದ ಸುಮಾರು ಮೂರು ತಿಂಗಳ ನಂತರ ಈಗ ಹೊರಜಗತ್ತಿಗೆ ತಿಳಿದುಬಂದಿದೆ. ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬುವರಿಗೆ ಈ ಹಣ ಸೇರಿದ್ದೆಂದು ಹೇಳಲಾಗುತ್ತಿದೆ. ಚೋರ್ಲಾ ಘಾಟ್ ಮೂಲಕ ಸಾಗುತ್ತಿದ್ದ ಈ ಕಂಟೇನರ್‌ ಗಳನ್ನು ಕಿಡಿಗೇಡಿಗಳು ಮಾರ್ಗಮಧ್ಯೆಯೇ ಅಪಹರಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎಂಬುವವರ ಅಪಹರಣದ ಬೆನ್ನಲ್ಲೇ ಈ ದರೋಡೆಯ ಕಥೆ ಬಯಲಾಗಿದೆ. ಉದ್ಯಮಿ ಕಿಶೋರ್ ಶೇಟ್ ಅವರ ಸಹಚರರು ಸಂದೀಪ್ ಪಾಟೀಲ್ ಅವರನ್ನು ಕಿಡ್ನ್ಯಾಪ್ ಮಾಡಿ, ‘ಕಂಟೇನರ್ ಹೈಜಾಕ್ ಆಗಲು ನೀನೇ ಕಾರಣ’ ಎಂದು ಆರೋಪಿಸಿ ಒಂದೂವರೆ ತಿಂಗಳ ಕಾಲ ಚಿತ್ರಹಿಂಸೆ ನೀಡಿದ್ದರು. ಅವರಿಂದ ಹೇಗೋ ತಪ್ಪಿಸಿಕೊಂಡು ಬಂದ ಸಂದೀಪ್ ಪಾಟೀಲ್ ನಾಸಿಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

1000 ಕೋಟಿ ದರೋಡೆ ಆರೋಪ: ದೂರುದಾರ ಸಂದೀಪ್ ಪಾಟೀಲ್ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಇದು ಕೇವಲ 400 ಕೋಟಿ ಅಲ್ಲ, ಬರೋಬ್ಬರಿ 1000 ಕೋಟಿ ರೂಪಾಯಿ ಹಗರಣ. ರದ್ದಾಗಿದ್ದ 2000 ಮುಖಬೆಲೆಯ ನೋಟುಗಳನ್ನು ಕಂಟೇನರ್‌ ನಲ್ಲಿ ಸಾಗಿಸಲಾಗುತ್ತಿತ್ತು. ಇದರಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಅಧಿಕಾರಿಗಳೂ ಭಾಗಿಯಾಗಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ತನಿಖೆ ಚುರುಕು: ಈ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ನಾಸಿಕ್ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ.

ಕರ್ನಾಟಕದ ಬೆಳಗಾವಿ ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸಲು ನಾಸಿಕ್‌ ಗೆ ತೆರಳಿದ್ದಾರೆ. ಆದರೆ ತನಿಖೆಗೆ ಮಹಾರಾಷ್ಟ್ರ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಮೂರು ರಾಜ್ಯಗಳ (ಕರ್ನಾಟಕ, ಗೋವಾ, ಮಹಾರಾಷ್ಟ್ರ) ಪೊಲೀಸರಿಗೆ ಈ ಪ್ರಕರಣ ದೊಡ್ಡ ಸವಾಲಾಗಿದ್ದು, ನಿಜವಾಗಿಯೂ ಅಷ್ಟು ದೊಡ್ಡ ಮೊತ್ತದ ಹಣ ಇತ್ತೇ? ಅದು ಎಲ್ಲಿಂದ ಬಂದಿದ್ದು? ಎಂಬ ಬಗ್ಗೆ ತನಿಖೆ ಮುಂದುವರಿದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version