ಇಸ್ರೇಲ್-ಹಮಾಸ್ ಯುದ್ಧ: ಕೊನೆಗೂ ಕದನ ವಿರಾಮ ಒಪ್ಪಂದಕ್ಕೆ ಸಿಕ್ತಾ ಗ್ರೀನ್ ಸಿಗ್ನಲ್..?

ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳುಗಳ ಮಾತುಕತೆಯ ಮಧ್ಯಸ್ಥಿಕೆ ವಹಿಸಿದ ಕತಾರ್, ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗಿನಿಂದ ಮಾತುಕತೆಗಳು ಅತ್ಯಂತ ಹತ್ತಿರದ ಹಂತದಲ್ಲಿವೆ ಎಂದು ಹೇಳಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಇಸ್ರೇಲ್ ಮತ್ತು ಫೆಲೆಸ್ತೀನ್ ಬಂಡುಕೋರರ ಗುಂಪು ಹಮಾಸ್ ನಡುವೆ ಮಾತುಕತೆ ನಡೆಯುತ್ತಿರುವ ಕದನ ವಿರಾಮ ಒಪ್ಪಂದವು ಬಹು ದಿನಗಳ ವಿರಾಮ ಪಡೆಯಲಿದೆ. ಹಮಾಸ್ ನಿಂದ ಸುಮಾರು 50 ನಾಗರಿಕ ಒತ್ತೆಯಾಳುಗಳ ಬಿಡುಗಡೆ ಮತ್ತು ಇಸ್ರೇಲಿ ಜೈಲುಗಳಿಂದ ಫೆಲೆಸ್ತೀನ್ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡುವುದು ಎಂದು ಮೂಲಗಳು ರಾಯಿಟರ್ಸ್ ಗೆ ತಿಳಿಸಿವೆ.
ಸಂಭಾವ್ಯ ಒಪ್ಪಂದವು ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗಿನಿಂದ ಅತಿದೊಡ್ಡ ಒತ್ತೆಯಾಳುಗಳ ಬಿಡುಗಡೆ ಮತ್ತು ಆರಂಭಿಕ ಕೈದಿಗಳ ವಿನಿಮಯವನ್ನು ಪ್ರತಿನಿಧಿಸುತ್ತದೆ. ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಹಮಾಸ್ ಸುಮಾರು 240 ಇಸ್ರೇಲಿಗಳನ್ನು ಒತ್ತೆಯಾಳುಗಳಾಗಿ ಗಾಝಾಗೆ ಕರೆದೊಯ್ದಿತ್ತು. ಅಲ್ಲದೇ 1,200 ಜನರನ್ನು ಕೊಂದಿತು ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ 5,600 ಮಕ್ಕಳು ಮತ್ತು 3,550 ಮಹಿಳೆಯರು ಸೇರಿದಂತೆ 13,300 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದಕ್ಕೂ ಮುನ್ನ ಮಂಗಳವಾರ, ಹಮಾಸ್ ನಾಯಕ ರಾಯಿಟರ್ಸ್ ಗೆ ಮಾಹಿತಿ ನೀಡಿ, ಫೆಲೆಸ್ತೀನ್ ಬಂಡುಕೋರರ ಗುಂಪು ಇಸ್ರೇಲ್ ನೊಂದಿಗೆ ಕದನ ವಿರಾಮ ಒಪ್ಪಂದವನ್ನು ತಲುಪುವ ಅಂಚಿನಲ್ಲಿದೆ ಎಂದು ಹೇಳಿದರು.
ಇಸ್ರೇಲಿ ಪಡೆಗಳು ಗಾಝಾದಲ್ಲಿ ನಡೆಯುತ್ತಿರುವ ನೆಲದ ಆಕ್ರಮಣದ ಹೊರತಾಗಿಯೂ ಈ ಹೇಳಿಕೆ ಬಂದಿದೆ.
ಕತಾರ್ ನೇತೃತ್ವದ ಮಾತುಕತೆಯ ಸ್ಥಿತಿಯ ಬಗ್ಗೆ ವ್ಯಾಖ್ಯಾನ ನೀಡುವುದನ್ನು ಇಸ್ರೇಲ್ ಸಾಮಾನ್ಯವಾಗಿ ತಪ್ಪಿಸಿದೆ. ಇಸ್ರೇಲ್ ಚಾನೆಲ್ 12 ಟೆಲಿವಿಷನ್ ಅನಾಮಧೇಯ ಹಿರಿಯ ಸರ್ಕಾರಿ ಮೂಲವನ್ನು ಉಲ್ಲೇಖಿಸಿ “ಅವರು ಹತ್ತಿರದಲ್ಲಿದ್ದಾರೆ” ಎಂದಿದೆ ಹೊರತು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ (ಐಸಿಆರ್ ಸಿ) ಅಧ್ಯಕ್ಷ ಮಿರ್ಜಾನಾ ಸ್ಪೋಲ್ಜಾರಿಕ್ ಸೋಮವಾರ ಕತಾರ್ ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಭೇಟಿ ಮಾಡಿ ಸಂಘರ್ಷಕ್ಕೆ ಸಂಬಂಧಿಸಿದ ಮಾನವೀಯ ಸಮಸ್ಯೆಗಳನ್ನು ಚರ್ಚಿಸಿದರು ಎಂದು ಜಿನೀವಾ ಮೂಲದ ಐಸಿಆರ್ ಸಿ ಹೇಳಿಕೆಯಲ್ಲಿ ತಿಳಿಸಿದೆ. ಅವರು ಕತಾರ್ ಅಧಿಕಾರಿಗಳನ್ನು ಪ್ರತ್ಯೇಕವಾಗಿ ಭೇಟಿಯಾದರು.