11:23 AM Saturday 23 - August 2025

ಕುರುಬರ ಸ್ವಾಮೀಜಿ ಒಳಗೆ ಬಂದರೆಂದು ದೇವಸ್ಥಾನ ಸ್ವಚ್ಛ ಮಾಡಿದ್ದರು: ಜಾತಿ ವ್ಯವಸ್ಥೆ ಬಗ್ಗೆ ಕನಕ ಪೀಠದ ಈಶ್ವರಾನಂದಪುರಿ ಶ್ರೀ  ಬೇಸರ

Iswaranandpuri shri
03/02/2024

ಚಿತ್ರದುರ್ಗ: ಬಾಗೂರು ಗ್ರಾಮದ ಚನ್ನಕೇಶವ ದೇಗುಲದಲ್ಲಿ  ನಾವು ದೇಗುಲಕ್ಕೆ ಹೋಗಿದ್ದೆವೆಂಬ ಕಾರಣಕ್ಕೆ ದೇವಾಲಯ ಸ್ವಚ್ಛಗೊಳಿಸಿದ್ದಾರೆ ಎಂದು ಸಾಣೇಹಳ್ಳಿಯಲ್ಲಿ ಕನಕ ಪೀಠದ ಈಶ್ವರಾನಂದಪುರಿ ಶ್ರೀ ಬೇಸರ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ ಪರಿವರ್ತನೆಯ ಹಾದಿಯಲ್ಲಿ ಮಠಗಳು ಗೋಷ್ಠಿಯಲ್ಲಿ ಶ್ರೀಗಳು ಮಾತನಾಡುತ್ತಿದ್ದರು.

ಕುರುಬರ ಸ್ವಾಮೀಜಿ ಒಳಗೆ ಬಂದರೆಂಬ ಕಾರಣಕ್ಕೆ ಸ್ವಚ್ಛತೆ ಮಾಡಿದ್ದಾರೆ. ನಾವು ಹೋಗಿದ್ದಕ್ಕಾಗಿ ದೇಗುಲ ಸ್ವಚ್ಛವಾಯಿತು. ಇನ್ನು ಮುಂದೆ ಚನ್ನಕೇಶವ ದೇಗುಲಕ್ಕೆ ನಾವು ಹೋಗಲ್ಲ. ಮುಜರಾಯಿ ದೇಗುಲ ಎಂದು ಗೊತ್ತಿದ್ದರೆ ಪ್ರತಿಭಟನೆ ಮಾಡುತ್ತಿದ್ದೆವು. ದೇವಾಲಯ ಸ್ವಚ್ಛ ಆಗೋದಲ್ಲ, ಮನಸ್ಸು ಸ್ವಚ್ಛ ಮಾಡಿಕೊಳ್ಳಿ. ಮುಂದಿನ ವರ್ಷದಿಂದ ಚನ್ನಕೇಶ ದೇವಸ್ಥಾನಕ್ಕೂ ನಾವು ಹೋಗಲ್ಲ ಎಂದು ಈಶ್ವರಾನಂದಪುರಿ ಶ್ರೀಗಳು ಹೇಳಿದ್ದಾರೆ.

ಉಡುಪಿಯಲ್ಲಿ ಕನಕದಾಸರು ಪ್ರತಿಭಟಿಸಿದಂತೆ ಪ್ರತಿಭಟಿಸುತ್ತಿದ್ದೆವು. ಆಗ ನಮಗೆ ಅದು ಮುಜರಾಯಿ ದೇಗುಲ ಎಂಬುದು ತಿಳಿದಿರಲಿಲ್ಲ. ವೈಕುಂಠ ಏಕಾದಶಿಗೆ ಹೋದಾಗ ನರಕ ತೋರಿಸಿಬಿಟ್ಟರು. ಪೂಜಾರಿ ಹೆಣ್ಣು ಮಕ್ಕಳಿಗೆಲ್ಲಾ ಗರ್ಭಗುಡಿಗೆ ಬಿಟ್ಟರು. ಮಠಾಧೀಶರಾದ ನಮಗೇ ಗರ್ಭಗುಡಿಯ ಒಳಗೆ ಬಿಡಲಿಲ್ಲ ಎಂದು ಕನಕ ಪೀಠದ ಈಶ್ವರಾನಂದಪುರಿ ಶ್ರೀ ಜಾತಿ ವ್ಯವಸ್ಥೆಯ ಘೋರವನ್ನು ನೆನಪಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version