ದೂರುದಾರನ ಬಂಧನದಿಂದ ಎಸ್‌ ಐಟಿ ತನಿಖೆ ನಿಲ್ಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್

g parameshwar
23/08/2025

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಮುಸುಕುಧಾರಿ ವ್ಯಕ್ತಿಯ ಬಂಧನವಾಗಿರುವುದು ನಿಜ. ಸತ್ಯವನ್ನು ಹೊರತರುವುದಕ್ಕಾಗಿಯೇ ನಮ್ಮ ಸರ್ಕಾರ ಎಸ್‌ ಐಟಿ ರಚಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿದ್ದೇನೆ ಎಂದಿದ್ದ ವ್ಯಕ್ತಿಯನ್ನು ಎಸ್‌ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಎಸ್‌ ಐಟಿಯ ತನಿಖೆ ಸಂಪೂರ್ಣ ಆಗುವವರೆಗೂ ಯಾವ ಮಾಹಿತಿಯೂ ನೀಡುವುದಕ್ಕೆ ಬರುವುದಿಲ್ಲ. ಬಂಧನ ಆಗಿರುವುದಂತೂ ಖಚಿತ ಎಂದು ಹೇಳಿದರು.

ಸಾಕ್ಷಿ ದೂರುದಾರನ ದೂರು ಆಧರಿಸಿಯೇ ನಾವು ಎಸ್‌ ಐಟಿಯನ್ನು ರಚಿಸಿದ್ದೇವೆ. ಸದ್ಯ ಎಸ್‌ಐಟಿ ತನಿಖೆ ಮುಂದುವರಿದಿದೆ. ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೆ ಯಾವ ಮಾಹಿತಿಯನ್ನೂ ಹಂಚಿಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಅದರ ಬಗ್ಗೆ ಯಾವ ನಿರ್ಣಯವೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇದರ ಹಿಂದೆ ದೊಡ್ಡ ಜಾಲ ಇದೆ ಎಂಬ ಬಗ್ಗೆಯೂ ಆರೋಪ ಕೇಳಿಬಂದಿದೆ. ಇದೂ ಕೂಡ ಪತ್ತೆಯಾಗಬೇಕಲ್ಲವೇ? ಜಾಲವಿದೆಯೇ? ಇಲ್ಲವೇ ಎಂಬ ಬಗ್ಗೆಯೂ ವರದಿ ಬಂದ ಬಳಿಕವಷ್ಟೇ ನನಗೆ ಉತ್ತರಿಸಲು ಸಾಧ್ಯ. ಅಲ್ಲಿಯವರೆಗೂ ಊಹಾಪೋಹಾಗಳು ಮಾತ್ರ ಇರುತ್ತದೆ ಎಂದರು.

ದೂರುದಾರನ ಬಂಧನದಿಂದ ಎಸ್‌ಐಟಿ ತನಿಖೆ ನಿಲ್ಲುತ್ತದೆ ಎಂಬುದರ ಬಗ್ಗೆ ಈಗ ಹೇಳುವುದಕ್ಕೆ ಸಾಧ್ಯವಿಲ್ಲ. ಸುಜಾತ ಭಟ್‌ ಅವರ ಪ್ರಕರಣದ ಬಗ್ಗೆಯೂ ಎಸ್‌ ಐಟಿ ತನಿಖೆ ನಡೆಸುತ್ತಿದೆ. ಹಾಗಾಗಿ, ಯಾವುದೇ ವಿಚಾರವನ್ನು ಈಗ ಹೇಳುವುದಕ್ಕೆ ಸಾಧ್ಯವಿಲ್ಲ. ಎಲ್ಲ ಮಾಹಿತಿಯನ್ನು ಹಂಚಿಕೊಂಡಲ್ಲಿ ತನಿಖೆಗೆ ತೊಡಕಾಗುತ್ತದೆ. ಬಿಜೆಪಿಯವರು ಆರೋಪ ಮಾಡುತ್ತಲೇ ಇರುತ್ತಾರೆ. ಬೇರೆ ಬೇರೆಯವರ ಹೇಳಿಕೆಗಳನ್ನೂ ಗಮನಿಸಿದ್ದೇನೆ. ಎಲ್ಲ ಹೇಳಿಕೆಗಳ ಆಧಾರದ ಮೇಲೆ ನಾವು ಯಾವ ನಿರ್ಣಯವೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version