ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಲು ಮೋದಿಗೆ 80 ದಿನಗಳು ಬೇಕಾಯಿತು: ಕೇರಳ ಸಿಎಂ ಪಿಣರಾಯಿ ಕಿಡಿ

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಣಿಪುರ ಹಿಂಸಾಚಾರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂಸಾಚಾರ ಪೀಡಿತ ಮಣಿಪುರದ ಬಗ್ಗೆ ಮಾತನಾಡಲು ಪ್ರಧಾನಿಯವರಿಗೆ 80 ದಿನಗಳು ಬೇಕಾಯಿತು ಎಂದು ಕಿಡಿಕಾರಿದ್ದಾರೆ.
ದಿಲ್ಲಿ ಮೂಲದ ಪತ್ರಕರ್ತ ಜಾರ್ಜ್ ಕಲ್ಲಿವಾಲಿಲ್ ಬರೆದಿರುವ ‘ಮಣಿಪುರ ಎಫ್‌ಐಆರ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ ವಿಜಯನ್, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ಮೇ ತಿಂಗಳಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಠ ಮೂರು ತಿಂಗಳಾದರೂ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಲು ಕೇಂದ್ರ ಸಚಿವರು ಮುಂದಾಗಲಿಲ್ಲ. ಮಣಿಪುರ ಕಳೆದ 6 ತಿಂಗಳಿನಿಂದ ಹಿಂಸಾಚಾರದಿಂದ ನಾಶವಾಗಿದೆ. ಕೆಲವೇ ಗಂಟೆಗಳಲ್ಲಿ ಇಸ್ರೇಲ್ ತಲುಪಿದ ಕೆಲವು ಮಾಧ್ಯಮಗಳು ಇನ್ನೂ ಮಣಿಪುರದ ಪರಿಸ್ಥಿತಿಯನ್ನು ವರದಿ ಮಾಡಲು ಹಿಂದೇಟು ಹಾಕಿವೆ ಎಂದಿದ್ದಾರೆ.
ಹಿಂಸಾಚಾರ ಭುಗಿಲೆದ್ದ ಕೂಡಲೇ ಪ್ರತಿಪಕ್ಷದ ಹಿರಿಯ ನಾಯಕರು ರಾಜ್ಯಕ್ಕೆ ಭೇಟಿ ನೀಡಿದರೂ ಪ್ರಧಾನಿಯಾಗಲಿ, ಸಚಿವರಾಗಲಿ ಈ ಬಗ್ಗೆ ಗಮನಹರಿಸಿಲ್ಲ. ಹಿಂಸಾಚಾರವು ಮೇ ನಲ್ಲಿ ಪ್ರಾರಂಭವಾಯಿತು. ದೇಶದ ಪ್ರಧಾನಿ ಮಣಿಪುರದ ಬಗ್ಗೆ ಒಂದು ಮಾತನ್ನು ಹೇಳಲು 80 ದಿನಗಳನ್ನು ತೆಗೆದುಕೊಂಡರು. ಅದೂ ಸಹಿತ ಅಲ್ಲಿ ನಡೆಯುತ್ತಿರುವ ಅನಾಗರಿಕ ಘಟನೆಗಳ ವರದಿಗಳು ಹೊರಬಂದ ನಂತರವೇ. ಅಲ್ಲಿಯವರೆಗೆ ಅವರು ಸಂಪೂರ್ಣವಾಗಿ ಮೌನವಾಗಿದ್ದರು ಎಂದು ವಿಜಯನ್ ವಾಗ್ದಾಳಿ ನಡೆಸಿದ್ದಾರೆ.