ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣ: ರೀಲ್ಸ್ ಗೀಳಿನಿಂದ ಅವಘಡ? 8 ಮಂದಿ ವಶಕ್ಕೆ
ಬಳ್ಳಾರಿ: ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಅವರಿಗೆ ಸೇರಿದ ನಗರದ ಜಿ–ಸ್ಕ್ವೇರ್ ಲೇಔಟ್‌ನಲ್ಲಿರುವ ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಪೊಲೀಸರು ಮಹತ್ವದ ತಿರುವು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಇವರಲ್ಲಿ ಆರು ಮಂದಿ ಅಪ್ರಾಪ್ತರು ಎಂಬುದು ತಿಳಿದುಬಂದಿದೆ.
ರೀಲ್ಸ್ ಮಾಡುವಾಗ ಅನಾಹುತ? ಪ್ರಾಥಮಿಕ ತನಿಖೆಯ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಲು ಈ ಯುವಕರು ಪಾಳುಬಿದ್ದಿದ್ದ ಮಾಡೆಲ್ ಹೌಸ್‌ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅಜಾಗರೂಕತೆಯಿಂದ ಅಥವಾ ಸಿಗರೇಟ್ ತುಣುಕಿನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಪೊಲೀಸರು ವಶಕ್ಕೆ ಪಡೆದಿರುವ ಎಂಟು ಮಂದಿಯಲ್ಲಿ ಹೆಚ್ಚಿನವರು ಶಾಲಾ-ಕಾಲೇಜು ವಿದ್ಯಾರ್ಥಿಗಳಾಗಿದ್ದು, ಇಬ್ಬರು ಮುಂಬೈನಿಂದ ಬಂದವರಾಗಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳ್ಳಾರಿ ಎಸ್ ಪಿ ಸುಮನ್ ಪೆನ್ನೇಕರ್, “ಈ ಮಾಡೆಲ್ ಹೌಸ್ ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಪಾಳುಬಿದ್ದಿತ್ತು. ಅಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಅಥವಾ ಸಿಸಿಟಿವಿ ಕ್ಯಾಮೆರಾಗಳು ಇರಲಿಲ್ಲ. ಮನೆಯೊಳಗೆ ಬೆಂಕಿಪೊಟ್ಟಣ ಮತ್ತು ಸಿಗರೇಟ್ ತುಣುಕುಗಳು ಪತ್ತೆಯಾಗಿವೆ. ರೀಲ್ಸ್ ಮಾಡುವ ಭರದಲ್ಲಿ ಬಾಲಕನೊಬ್ಬ ಹಚ್ಚಿದ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ ಎಂಬುದು ಪ್ರಾಥಮಿಕವಾಗಿ ಕಂಡುಬಂದಿದೆ” ಎಂದು ತಿಳಿಸಿದ್ದಾರೆ.
ರಾಜಕೀಯ ಆರೋಪ–ಪ್ರತ್ಯಾರೋಪ: ಈ ಬೆಂಕಿ ಅವಘಡದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಬಿಜೆಪಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರು ಆರೋಪಿಸಿದ್ದರು. ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಈ ಹಿಂದೆ ಬ್ಯಾನರ್ ಹರಿದ ಪ್ರಕರಣದ ವೇಳೆ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿತ್ತು, ಅದರ ಮುಂದುವರಿದ ಭಾಗವೇ ಇದು ಎಂದು ದೂರಿದ್ದರು. ಆದರೆ, ತನಿಖೆಯಲ್ಲಿ ಸದ್ಯಕ್ಕೆ ಯಾವುದೇ ದುರುದ್ದೇಶದ ರಾಜಕೀಯ ಸಂಚು ಕಂಡುಬಂದಿಲ್ಲವಾದರೂ, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.
ವಿಧಿ ವಿಜ್ಞಾನ ತಜ್ಞರ (FSL) ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಘಟನೆಯಿಂದಾಗಿ ನಗರದಲ್ಲಿ ಬಿಗುವಿನ ವಾತಾವರಣವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























