ನಗದು, ಆಭರಣಗಳ ಸಮೇತ ಬಾಲಕಿ ಅಪಹರಣ: ‘ಧೈರ್ಯವಿದ್ದರೆ ನನ್ನನ್ನು ಹಿಡಿಯಿರಿ’ ಎಂದು ಪೊಲೀಸರಿಗೆ ಆರೋಪಿ ಸವಾಲು!

kidnep releted image
06/09/2026

ಗುಂಟೂರು (ಆಂಧ್ರಪ್ರದೇಶ): ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯೊಬ್ಬಳನ್ನು ಯುವಕನೊಬ್ಬ ನಗದು ಹಾಗೂ ಚಿನ್ನಾಭರಣಗಳ ಸಮೇತ ಅಪಹರಿಸಿಕೊಂಡು ಹೋಗಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಆರೋಪಿಯು ಪೊಲೀಸರಿಗೇ ಸವಾಲು ಹಾಕಿದ್ದು, ಈ ಪ್ರಕರಣವು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಗುಂಟೂರಿನ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ 15 ವರ್ಷದ ಬಾಲಕಿಗೆ, ಇನ್ಸ್ಟಾಗ್ರಾಮ್ ಮೂಲಕ ಪರ್ಚೂರ್ನ ಶೇಖ್ ಜಾನ್ಸೈದಾ (28) ಎಂಬಾತ ಪರಿಚಯವಾಗಿದ್ದನು. ಬಾಲಕಿಯ ಕುಟುಂಬ ಶ್ರೀಮಂತವಾಗಿರುವುದನ್ನು ತಿಳಿದು ಆರೋಪಿ ಆಕೆಯನ್ನು ನಂಬಿಸಿ, ಜೂನ್ 9ರಂದು ಟ್ಯೂಷನ್ ಮುಗಿಸಿ ಮನೆಗೆ ಬಂದಿದ್ದ ಬಾಲಕಿಯನ್ನು ಅಪಹರಿಸಿ ಬೈಕ್ ನಲ್ಲಿ ಕರೆದುಕೊಂಡು ಪರಾರಿಯಾಗಿದ್ದಾನೆ. ಹೋಗುವಾಗ ಮನೆಯಲ್ಲಿದ್ದ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ಸಹ ಬಾಲಕಿ ಜತೆಗೆ ತೆಗೆದುಕೊಂಡು ಹೋಗಿದ್ದಾಳೆ.

ಮನೆಗೆ ಬಾಲಕಿ ವಾಪಸ್ ಬಾರದ ಹಿನ್ನೆಲೆಯಲ್ಲಿ ಪೋಷಕರು ಜೂನ್ 10ರಂದು ಪಟ್ಟಾಭಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಾಣೆಯಾಗಿ ಮೂರು ತಿಂಗಳಾದರೂ ಬಾಲಕಿ ಪತ್ತೆಯಾಗದ ಕಾರಣ ಆಕೆಯ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಾಣದ ಬಗ್ಗೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ, ಎಸ್ ಐ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ಆರೋಪಿಯು ಸಿಕ್ಕಿಬೀಳುವ ಭಯದಿಂದ ಆನ್ಲೈನ್ ಪಾವತಿಗಳನ್ನು ಮಾಡದೆ, ಕೇವಲ ನಗದು ಹಣವನ್ನೇ ಬಳಸುತ್ತಿದ್ದಾನೆ. ಅಲ್ಲದೆ, ಸ್ಥಳದಿಂದ ಸ್ಥಳಕ್ಕೆ ತಿರುಗುತ್ತಾ 10ಕ್ಕೂ ಹೆಚ್ಚು ಸೆಲ್ಫೋನ್ ಗಳು ಮತ್ತು ಸಿಮ್ ಕಾರ್ಡ್ ಗಳನ್ನು ಬದಲಾಯಿಸುತ್ತಾ ಪೊಲೀಸರ ಕಣ್ಣಿಗೆ ಮಣ್ಣೆ ಎರಚುತ್ತಿದ್ದಾನೆ. ಸಿಕಂದರಾಬಾದ್, ತಮಿಳುನಾಡು, ಕೇರಳದ ಪಾಲಕ್ಕಾಡ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಪತ್ತೆಯಾಗಿದೆ. ಪೊಲೀಸರು ಆತನ ಜಾಡು ಹಿಡಿದು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗುತ್ತಿದ್ದಾನೆ.

ಐದು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಬಾಲಕಿಯ ಪೋಷಕರಿಗೆ ಸಂದೇಶ ಕಳುಹಿಸಿರುವ ಆರೋಪಿ ಜಾನ್ಸೈದಾ, “ಧೈರ್ಯವಿದ್ದರೆ ನನ್ನನ್ನು ಹಿಡಿಯಿರಿ” ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾನೆ. ಅಲ್ಲದೆ, ಅದೇ ಖಾತೆಯಿಂದ ಬಾಲಕಿಯ ತಾಯಿಗೆ ಮಿಸ್ಡ್ ಕಾಲ್ ಕೂಡ ಬಂದಿದ್ದು, ಇದರ ಆಧಾರದ ಮೇಲೆ ಪೊಲೀಸರು ತಾಂತ್ರಿಕ ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗುಂಟೂರು ಜಿಲ್ಲಾ ಎಸ್ಪಿ ವಕುಲ್ ಜಿಂದಾಲ್, “ತಾಂತ್ರಿಕ ತಜ್ಞರ ಸಹಾಯದಿಂದ ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚಲಾಗುತ್ತಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು. ಸದ್ಯ ಈ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಬಿಂಬಿಸಲು ಸಾಧ್ಯವಿಲ್ಲ, ಹೀಗಾಗಿ ಸಾರ್ವಜನಿಕರು ಯಾವುದೇ ವದಂತಿಗಳನ್ನು ಹರಡಬಾರದು” ಎಂದು ಮನವಿ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi
Exit mobile version