ಹುಡುಗಿಯ ಜೊತೆಗಿನ ಸ್ನೇಹದ ವಿಚಾರಕ್ಕೆ ಗಲಾಟೆ: 9ನೇ ತರಗತಿ ವಿದ್ಯಾರ್ಥಿ ಹತ್ಯೆ ಮಾಡಿದ ಅಪ್ರಾಪ್ತರ ಗುಂಪು, ಮೂವರು ವಶಕ್ಕೆ

police
05/09/2026

ನವದೆಹಲಿ: ಶಾಲೆಯ ಸಹಪಾಠಿ ಬಾಲಕಿ ಜೊತೆಗಿನ ಸ್ನೇಹದ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ಮೂವರು ಬಾಲಕರು 9ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಹಾಡಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ ನಂಗ್ಲೋಯ್ ಪ್ರದೇಶದಲ್ಲಿ ವರದಿಯಾಗಿದೆ.

15 ವರ್ಷದ ಬಾಲಕನೊಬ್ಬ ಬಾಲಕಿ ಹಾಗೂ ತನ್ನ ಕೆಲವು ಸ್ನೇಹಿತರೊಂದಿಗೆ ಗುರುವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಬಾಲಕನೊಂದಿಗೆ ವಿದ್ಯಾರ್ಥಿನಿ ಶಾಲೆಯಿಂದ ವಾಪಸ್ಸಾಗುತ್ತಿದ್ದಾಗ, ಅಡ್ಡಗಟ್ಟಿದ ಮೂವರು ಹುಡುಗರ ಗುಂಪು ಆ ಹುಡುಗಿ ಕುರಿತು ವಿಚಾರಿಸಿ, ಬಳಿಕ ಮೃತ ಬಾಲಕನೊಂದಿಗೆ ವಾಗ್ವಾದ ನಡೆಸಿದೆ.

ಆರಂಭದಲ್ಲಿ ತಣ್ಣಗಾಗಿದ್ದ ಜಗಳ, ಸುಮಾರು 15 ರಿಂದ 20 ನಿಮಿಷಗಳ ನಂತರ ಮತ್ತೆ ಪುನರಾವರ್ತನೆಯಾಗಿದೆ. ಆರೋಪಿಗಳು ಬಾಲಕನನ್ನು ಮತ್ತೆ ತಡೆದು ನಿಲ್ಲಿಸಿ ಆ ಹುಡುಗಿಯೊಂದಿಗಿನ ಸ್ನೇಹದ ವಿಷಯವಾಗಿ ತೀವ್ರ ವಾಗ್ವಾದ ನಡೆಸಿದ್ದಾರೆ. ಜಗಳ ತಾರಕಕ್ಕೇರುತ್ತಿದ್ದಂತೆ ಆರೋಪಿ ಬಾಲಕರಲ್ಲಿ ಒಬ್ಬ, ಮೃತ ಬಾಲಕನ ಬಲ ತೊಡೆಗೆ ಚಾಕುವಿನಿಂದ ಇರಿದು ತನ್ನ ಇಬ್ಬರು ಸಹಚರರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಿಂದ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ತಕ್ಷಣವೇ ಸೋನಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಬಾಲಕನ ತೊಡೆಯಲ್ಲಿ ಆಳವಾದ ಇರಿತ ಉಂಟಾಗಿದ್ದರಿಂದ ಅಪಾರ ಪ್ರಮಾಣದಲ್ಲಿ ರಕ್ತಸ್ರಾವವಾಗಿ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂವರು ಅಪ್ರಾಪ್ತರು ಪೊಲೀಸರ ವಶಕ್ಕೆ:

ಆಸ್ಪತ್ರೆಯಿಂದ ಬಂದ ಪಿಸಿಆರ್ (PCR) ಕರೆಯ ಆಧಾರದ ಮೇಲೆ ನಂಗ್ಲೋಯ್ ಪೊಲೀಸ್ ಠಾಣೆಯ ತಂಡವು ತಕ್ಷಣ ಆಸ್ಪತ್ರೆಗೆ ತೆರಳಿ ಮಾಹಿತಿ ಸಂಗ್ರಹಿಸಿತು. ದೂರು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಅಪ್ರಾಪ್ತರನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶುಕ್ರವಾರ ಮರಣೋತ್ತರ ಪರೀಕ್ಷೆಯ ಬಳಿಕ ಬಾಲಕನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ನಂಗ್ಲೋಯ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi
Exit mobile version