ಇಂದು ನನ್ನ ಕಣ್ಣು ತೆರೆಯಿತು: ಪ್ರಭಾಕರ್ ಭಟ್ ಅವರನ್ನು ಹಾಡಿ ಹೊಗಳಿದ ಕುಮಾರಸ್ವಾಮಿ

ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ, ಕೆಲವರು ದಾರಿ ತಪ್ಪಿಸಿದ್ದರು. ಇಂದು ನನ್ನ ಕಣ್ಣು ತೆರೆದಿದೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ನಡೆದ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಚ್.ಡಿ.ಕುಮಾರಸ್ವಾಮಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಹಾಡಿಹೊಗಳಿದರು.
ಈ ವಿದ್ಯಾಸಂಸ್ಥೆಯಲ್ಲಿ ಉತ್ತಮ ಶಿಸ್ತಿನ ಬದುಕನ್ನು ಕಲಿಸಿಕೊಡಲಾಗುತ್ತದೆ. ಮಾನವೀಯತೆಯ ವಿಕಸನ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಬಾರದೇ ಇದ್ದಿದ್ದರೆ ಜೀವನದಲ್ಲಿ ದೊಡ್ಡ ನಷ್ಟವಾಗುತ್ತಿತ್ತು ಎಂದರು.
ಚಂದ್ರಯಾನ ಉಡಾವಣೆಯನ್ನು ಬಹಳ ಚೆನ್ನಾಗಿ ತೋರಿಸಿದ್ದೀರಿ, ಮಕ್ಕಳಿದ್ದಾಗ ರಾಮನ ಭಜನೆ ಮಾಡಿರುವುದನ್ನು ನೆನಪಿಸಿದ್ದೀರಿ. ಪ್ರಭಾಕರ್ ಭಟ್ ಬದುಕಿನ ಒಳ್ಳೆಯ ನಡವಳಿಕೆ ಕಲಿಸುವ ನಿಟ್ಟಿನಲ್ಲಿ ಸರ್ಕಾರದ ಕಣ್ಣು ತೆರೆಸುತ್ತಿದ್ದೀರಿ ಎಂದು ಅವರು ಹೇಳಿದರಲ್ಲದೇ ತಮ್ಮ ಭಾಷಣದ ಕೊನೆಯಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದರು.