ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ರಾಜೀನಾಮೆ: ಮತದಾರರು, ಕಾರ್ಯಕರ್ತರಿಗೆ ಭಾವನಾತ್ಮಕ ಪತ್ರ

m k pranesh.jpg
01/08/2026

ಚಿಕ್ಕಮಗಳೂರು: ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಎಂ.ಕೆ. ಪ್ರಾಣೇಶ್ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಕ್ಷೇತ್ರದ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಹೈಕೋರ್ಟ್ ತೀರ್ಪಿಗೆ ತಲೆಬಾಗಿದ್ದು, ಉಪಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಪ್ರಾಣೇಶ್ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರ ಮತದಾನ ಪ್ರಕ್ರಿಯೆಯು ಈ ಕಾನೂನು ಹೋರಾಟದ ಮುಖ್ಯ ಬಿಂದುವಾಗಿತ್ತು.

1997 ರಿಂದಲೂ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವ ಪದ್ಧತಿ ಜಾರಿಯಲ್ಲಿತ್ತು. ಆದರೆ, ಪ್ರಸ್ತುತ ಕಾನೂನು ಹೋರಾಟದಲ್ಲಿ ಬಂದ ತೀರ್ಪು ನನ್ನ ಪರವಾಗಿ ಬರದೆ ವ್ಯತಿರಿಕ್ತವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕೂವರೆ ವರ್ಷಗಳ ಕಾಲ ಪಾರದರ್ಶಕ, ಭ್ರಷ್ಟಾಚಾರ ರಹಿತ ಹಾಗೂ ಪಕ್ಷಾತೀತವಾಗಿ ಜನಸೇವೆ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ ಎಂದಿದ್ದಾರೆ. ಅಲ್ಲದೇ, ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರಿಗೆ ಶುಭಾಶಯ ಕೋರಿರುವ ಪ್ರಾಣೇಶ್, ಅವರು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಮುಂದುವರಿಸಲಿ ಎಂದು ಹಾರೈಸಿದ್ದಾರೆ.

ಭಾವನಾತ್ಮಕ ಸಂದೇಶ :

“ಈ ನ್ಯಾಯಾಲಯದ ತೀರ್ಪಿನಿಂದ ಯಾರೂ ಎದೆಗುಂದಬೇಡಿ ಅಥವಾ ನಿರಾಶರಾಗಬೇಡಿ. ಅಧಿಕಾರ ಮತ್ತು ಸ್ಥಾನಮಾನಗಳು ಶಾಶ್ವತವಲ್ಲ, ಆದರೆ ನಿಮ್ಮೊಂದಿಗಿನ ಸಂಬಂಧ ಶಾಶ್ವತ. ಅಧಿಕಾರ ಕಳೆದುಕೊಂಡರೂ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಜೊತೆಯಲ್ಲೇ ಇರುತ್ತೇನೆ. ಮುಂಬರುವ ದಿನಗಳಲ್ಲಿ ನಾವೆಲ್ಲರೂ ಇನ್ನಷ್ಟು ಶಕ್ತಿಯುತವಾಗಿ ಮುನ್ನಡೆಯೋಣ.”

ತಮ್ಮ ನಾಲ್ಕೂವರೆ ವರ್ಷಗಳ ಆಡಳಿತಾವಧಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ ಭಾರತೀಯ ಜನತಾ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ಸಮಸ್ತ ಜನತೆಗೆ ಎಂ.ಕೆ. ಪ್ರಾಣೇಶ್ ಅವರು ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version