5:11 PM Saturday 8 - November 2025

ಮಿಂಚಿನ ಕಾರ್ಯಾಚರಣೆ: ಕಾಟಿ ಶಿಕಾರಿ ಪ್ರಕರಣದಲ್ಲಿ 6 ಆರೋಪಿಗಳ ಬಂಧನ

chikkamagaluru news
08/11/2025

ಮೂಡಿಗೆರೆ (ಕೊಟ್ಟಿಗೆಹಾರ):  ಮಲೆನಾಡಿನ ಕಾಡು ಪ್ರದೇಶದಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಕಾಟಿ (ಕಾಡುಕೋಣ) ಶಿಕಾರಿ ಹಾಗೂ ಮಾಂಸ ಸರಬರಾಜು ಜಾಲವನ್ನು ಮೂಡಿಗೆರೆ ಅರಣ್ಯ ಅಧಿಕಾರಿಗಳು ಭೇದಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ ರಾತ್ರಿ ಉಪ ವಲಯ ಅರಣ್ಯಾಧಿಕಾರಿ ಸುಹಾಸ್ ಅವರ ನೇತೃತ್ವದ ತಂಡವು ದಾಳಿ ನಡೆಸಿ, ಬಾಳೂರು ಹೊರಟ್ಟಿ ಗ್ರಾಮದ ಮಂಜಯ್ಯ ಮನೆಗೆ ತೆರಳಿ ಅಲ್ಲಿ ಬೇಯಿಸುತ್ತಿದ್ದ ಕಾಟಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳದಲ್ಲಿದ್ದ ಮಂಜಯ್ಯನನ್ನು ವಿಚಾರಿಸಿದ ವೇಳೆ, ಅವರು ನೀಡಿದ ಮಾಹಿತಿಯ ಮೇರೆಗೆ ಕಲ್ಮನೆ ಕಾಫಿ ತೋಟದಲ್ಲಿ ಕಾಟಿ ಶಿಕಾರಿ ನಡೆದಿರುವುದು ಬಹಿರಂಗವಾಗಿದೆ. ಶಿಕಾರಿಯಲ್ಲಿ ತೋಟದ ಮ್ಯಾನೇಜರ್ ರವೀಶ್ ಬಿ.ಎಸ್. ಮತ್ತು ಬಾಳೆಹೊನ್ನೂರಿನ ಜೀವನ್ ಪ್ರಮುಖ ಪಾತ್ರವಹಿಸಿದ್ದರೆಂದು ತಿಳಿದುಬಂದಿದೆ. ಜೀವನ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.

ಮಾಂಸವನ್ನು ಶುದ್ಧಗೊಳಿಸಿ ಹಂಚಿಕೊಂಡಿರುವ ನೀಡುವಳೆ ಗ್ರಾಮದ ಸೀನ, ಸುಂದರ್ ಮತ್ತು ಮಂಜಯ್ಯ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಶಿಕಾರಿ ಮಾಂಸವನ್ನು ತಿಂದ ತೋಟದ ಮಾಲೀಕ ಧೀರಜ್ ಪ್ರಭು ಸೇರಿದಂತೆ ಮೂವರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ.

ಮಾಂಸ ಸರಬರಾಜಿನಲ್ಲಿ ಭಾಗಿಯಾಗಿದ್ದ ದೇಜಪ್ಪ ಮತ್ತು ಪ್ರದೀಪ್ ಅವರನ್ನು ಸಹ ಬಂಧಿಸಲಾಗಿದೆ. ಒಟ್ಟು 6 ಆರೋಪಿಗಳನ್ನು ಬಂಧಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಶಿಕಾರಿ, ಮಾಂಸ ಸರಬರಾಜು ಮತ್ತು ಕಳ್ಳಸಾಗಣೆ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ತಡರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಮಂಜುನಾಥ, ಉಪ ವಲಯ ಅರಣ್ಯಾಧಿಕಾರಿ ಸುಹಾಸ್, ಹಾಗೂ ಅರಣ್ಯ ರಕ್ಷಕರು ಲಕ್ಷ್ಮಣ್, ರಘು, ಉಮೇಶ್ ಮತ್ತು ವಾಹನ ಚಾಲಕ ಸುಮಂತ್ ಅವರ ತಂಡ ಯಶಸ್ವಿಯಾಗಿ ನಡೆಸಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳ್ಳ ಬೇಟೆ ಪ್ರಕರಣಗಳು ನಿರಂತರವಾಗುತ್ತಿದ್ದು, ಈ ಘಟನೆ ಮತ್ತೊಮ್ಮೆ ಅರಣ್ಯ ಇಲಾಖೆ ಮುಂದೆ ಹೊಸ ಸವಾಲು ಎಬ್ಬಿಸಿದೆ. ಜಿಲ್ಲೆಯಾದ್ಯಂತ ಬಂದೂಕು ಪರವಾನಿಗೆಗೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಕಳ್ಳ ಬೇಟೆ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version