ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕುಸಿಯಲು ಕಾರಣ ಬಯಲು!

banglore
27/04/2024

ಬೆಂಗಳೂರು: ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕುಸಿತ ಕಂಡಿರುವುದು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ನಗರಗಳಲ್ಲಿ ವಿದ್ಯಾವಂತರಿದ್ದರೂ, ಮತದಾನದಲ್ಲಿ ಬೆಂಗಳೂರು ಹಿಂದುಳಿಯಲು ಕಾರಣ ಏನು ಎನ್ನುವ ಚರ್ಚೆ, ಆಕ್ರೋಶಗಳು ಕೇಳಿ ಬಂದಿತ್ತು. ಕೆಲವರಂತೂ ಮತಚಲಾಯಿಸದವರ ಹೆಸರನ್ನು ಮತಪಟ್ಟಿಯಿಂದ ತೆಗೆಯಬೇಕು ಎನ್ನುವಂತೆ ಹೇಳಿಕೆ ನೀಡಿದ್ದರು. ಇದೀಗ ಬೆಂಗಳೂರು ನಗರಲದ ಮೂರು ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕುಸಿಯಲು ಪ್ರಮುಖ ಕಾರಣಗಳೇನು ಎನ್ನುವುದು ಬಯಲಾಗಿದೆ.

ಚುನಾವಣಾ ಆಯೋಗ ಪ್ರಕಟಿಸಿರುವ ತಾತ್ಕಾಲಿಕ ಅಂಕಿ ಅಂಶ ಪ್ರಕಾರ, ಬೆಂಗಳೂರು ಉತ್ತರದಲ್ಲಿ ಶೇಕಡ 54.42 ( 2019ಕ್ಕೆ ಹೋಲಿಸಿದರೆ ಶೇ 0.34 ಕಡಿಮೆ) ಮತದಾನ ಪ್ರಮಾಣ ದಾಖಲಾಗಿದೆ. ಈ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶೇಕಡ 54.76 ಮತದಾನವಾಗಿತ್ತು. ಇನ್ನು ಬೆಂಗಳೂರು ಸೆಂಟ್ರಲ್ ನಲ್ಲಿ ಈ ಬಾರಿ ಶೇಕಡ 53.81 ಮತದಾನವಾಗಿದೆ. 2019ರಲ್ಲಿ ಶೇಕಡ 55.32 ಮತದಾನವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 1.51ರಷ್ಟು ಮತದಾನ ಕಡಿಮೆಯಾಗಿದೆ.

ದಕ್ಷಿಣ ಬೆಂಗಳೂರಿನಲ್ಲಿ ಈ ಬಾರಿ ಶೇಕಡ 53.15 ಮತದಾನವಾಗಿದೆ. ಕಳೆದ ಬಾರಿ ಇಲ್ಲಿ ಶೇಕಡ 54.7 ಮತದಾನವಾಗಿತ್ತು. ಈ ಕ್ಷೇತ್ರದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಕಡ 1.55 ರಷ್ಟು ಮತದಾನ ಪ್ರಮಾಣ ಕಡಿಮೆಯಾಗಿದೆ. ಆದಾಗ್ಯೂ, ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ರಾಜರಾಜೇಶ್ವರಿನಗರ ಮತ್ತು ಬೆಂಗಳೂರು ದಕ್ಷಿಣದ ಎರಡು ನಗರ ವಿಧಾನಸಭಾ ಕ್ಷೇತ್ರಗಳು ಕಳಪೆ ಪ್ರದರ್ಶನ ಕಂಡುಬಂದಿದೆ. ಇಲ್ಲಿ ಸುಮಾರು 55 ಪ್ರತಿಶತದಷ್ಟು ಮತದಾನವಾಗಿದೆ. ಆನೇಕಲ್‌ನಲ್ಲಿ ಶೇ.60ರಷ್ಟು ಮತದಾನವಾಗಿದ್ದರೆ, ಉಳಿದ ಎಲ್ಲ ಕ್ಷೇತ್ರಗಳಲ್ಲಿ ಶೇ.80ಕ್ಕೂ ಹೆಚ್ಚು ಮತದಾನವಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ಈ ಬಾರಿ ಶೇಕಡ 67.29 ಮತದಾನ ಪ್ರಮಾಣ ದಾಖಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಶೇಕಡ 64.9 ಮತದಾನವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾಗಿ 2.31 ಮತದಾನ ಹೆಚ್ಚಳವಾಗಿದೆ.

ಮತದಾನ ಪ್ರಮಾಣ ಕುಸಿತಕ್ಕೆ ಕಾರಣಗಳಿವು:

1) ಮತದಾರರ ಪಟ್ಟಿಯಲ್ಲಿ ಮೃತರ ಹೆಸರು ಡಿಲೀಟ್ ಆಗಿಲ್ಲ. ಊರುಬಿಟ್ಟವರ ಹೆಸರು ರದ್ದುಗೊಳಿಸಿಲ್ಲ. ಉದ್ಯೋಗ, ಶಿಕ್ಷಣ ನಿಮಿತ್ತ ಬೇರೆ ದೇಶ, ರಾಜ್ಯಗಳಿಗೆ ಹೋದವರು ಮತದಾನಕ್ಕೆ ಬಂದಿಲ್ಲ ಎಂಬುದನ್ನು ಅನೇಕರು ಉಲ್ಲೇಖಿಸುತ್ತಾರೆ.

2) ಇನ್ನು ಕೆಲವರ ಬಳಿ ಮತದಾರರ ಗುರುತಿನ ಚೀಟಿ ಇದ್ದರೂ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲದೇ ಇರುವ ಕಾರಣ ಮತದಾನ ಮಾಡಲು ಸಾಧ್ಯವಾಗಿಲ್ಲ. ಈ ಸಮಸ್ಯೆ ಪ್ರತಿಬಾರಿ ಕಾಡುವಂಥದ್ದು. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ.

3) ಮತದಾನ ದಿನ ಶುಕ್ರವಾರ ಬಂದಿದ್ದು, ವಾರಾಂತ್ಯವಾದ ಕಾರಣ ಅನೇಕರು ವಾರಾಂತ್ಯದ ರಜೆ ನೆಪದಲ್ಲಿ ಊರು, ಪ್ರವಾಸಕ್ಕೆ ಹೋಗಿದ್ದಾರೆ.

4) ಬೆಂಗಳೂರಿನಲ್ಲಿ ಹಿಂದೆಂದೂ ಅನುಭವಿಸಿ ಅರಿಯದ ತಾಪಮಾನ, ಉಷ್ಣಾಂಶದ ಕಾರಣ ಅನೇಕರು ಮನೆಬಿಟ್ಟು ಹೊರಗೆ ಬಂದಿಲ್ಲ. ಇದು ಮತದಾನ ಕಡಿಮೆಯಾಗಲು ಕಾರಣ ಎಂಬುದೂ ಉಲ್ಲೇಖವಾಗುತ್ತಿದೆ.

5) ನೀರಿನ ಕೊರತೆ, ಮೂಲಸೌಕರ್ಯ ಕೊರತೆ ಕಾರಣ ನೊಂದವರು ಕೂಡ ಮತದಾನಕ್ಕೆ ಬಂದಿಲ್ಲ ಎಂಬ ಮಾತುಗಳೂ ಕೇಳಿಬಂದಿದೆ.

 

ಇತ್ತೀಚಿನ ಸುದ್ದಿ

Exit mobile version