ಮಧ್ಯಪ್ರದೇಶ ಎಲೆಕ್ಷನ್: ಬೆಳಗ್ಗೆದ್ದು ಬೇಗ ವೋಟ್ ಮಾಡಿದ್ರೆ ಉಚಿತ ಅವಲಕ್ಕಿ, ಜಿಲೇಬಿ ತಿನ್ನುವ ಆಫರ್..!

14/10/2023

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣಾ ದಿನದಂದು ಬೆಳಗ್ಗಿನ ಸಮಯ ಇಂಧೋರ್‌ನಲ್ಲಿ ಮತದಾನ ಮಾಡುವವರಿಗೆ ಪೋಹಾ ಅಂದರೆ ಅವಲಕ್ಕಿ ಹಾಗೂ ಜಿಲೇಬಿಯನ್ನು ಒಳಗೊಂಡಿರುವ ಉಚಿತ ತಿಂಡಿಗಳನ್ನು ನೀಡಲು ಅಲ್ಲಿನ ಅಂಗಡಿ ಮಾಲೀಕರು ನಿರ್ಧಾರ ಮಾಡಿದ್ದಾರೆ.

ಮಧ್ಯಪ್ರದೇಶದ ಇಂದೋರ್ ನಗರದ ಪ್ರಸಿದ್ಧ ಆಹಾರ ಕೇಂದ್ರವಾದ 56 ದುಖಾನ್ ಫುಡ್ ಹಬ್‌ ಮಾಲೀಕರು ಮತದಾನದ ಪ್ರಮಾಣವನ್ನು ಹೆಚ್ಚಿಸಲು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯ ಚುನಾವಣೆಯು ನವೆಂಬರ್ 17ರಂದು ನಡೆಯಲಿದ್ದು, ಒಂದೇ ಹಂತದ ಚುನಾವಣೆಯಾಗಿದೆ.

ಬೆಳಗ್ಗೆ ಬೇಗ ಬಂದು ವೋಟ್ ಮಾಡಿದವರು ಬೆರಳಿಗೆ ಹಾಕಿದ ಶಾಯಿಯನ್ನು ಅಂಗಡಿ ಮಾಲೀಕರಿಗೆ ತೋರಿಸಬೇಕು. ಅದಾದ ನಂತರ ಉಚಿತ ಪೋಹಾ ಹಾಗೂ ಜಿಲೇಬಿಯನ್ನು ನೀಡಲಾಗುತ್ತದೆ ಎಂದು ಅಂಗಡಿ ಮಾಲೀಕರು ಘೋಷಿಸಿದ್ದಾರೆ.

ಈ ಕುರಿತು ಮಾತನಾಡಿದ 56 ದುಖಾನ್‌ ಟ್ರೇಡರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಗುಂಜನ್ ಶರ್ಮಾ ಮಾತನಾಡಿ, ಶುಚಿತ್ವದ ವಿಷಯದಲ್ಲಿ ಇಂದೋರ್ ದೇಶದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಮತದಾನದ ವಿಷಯದಲ್ಲಿಯೂ ನಮ್ಮ ನಗರವು ಅಗ್ರಸ್ಥಾನದಲ್ಲಿರಬೇಕೆಂದು ನಾವು ಬಯಸುತ್ತೇವೆ. ಇದಕ್ಕಾಗಿ ಮತದಾನ ಮಾಡಿದವರಿಗೆ ಉಚಿತ ಪೋಹ ಮತ್ತು ಜಿಲೇಬಿ ನೀಡಲು ನಿರ್ಧರಿಸಿದ್ದೇವೆ. ಈ ಕೊಡುಗೆಯು ಮತದಾನದ ದಿನವಾದ ನವೆಂಬರ್ 17 ರಂದು ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಮಾತ್ರ ಉಚಿತವಾಗಿ ನೀಡಲಿದ್ದೇವೆ. ಇದರ ನಂತರ, ಆ ದಿನವಿಡೀ ಪ್ರತಿ ಮತದಾರರಿಗೆ ಪೋಹಾ-ಜಲೇಬಿಯ ಬಿಲ್‌ನಲ್ಲಿ ಶೇಕಡಾ 10 ರಷ್ಟು ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ ಎಂದಿದ್ದಾರೆ.

ಇತ್ತೀಚಿನ ಸುದ್ದಿ

Exit mobile version