ದೆಹಲಿಯ ಅಲಿಪುರ್ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ: 7 ಮಂದಿ ಸಾವು

ದೆಹಲಿಯ ಅಲಿಪುರದ ಮುಖ್ಯ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಈ ಘಟನೆಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ದೆಹಲಿಯ ಅಲಿಪುರದ ದಯಾಳ್ ಮಾರುಕಟ್ಟೆಯಲ್ಲಿರುವ ಪೇಂಟ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. “ಅಲಿಪುರದ ದಯಾಳ್ ಮಾರುಕಟ್ಟೆಯಲ್ಲಿ ಭುಗಿಲೆದ್ದ ಬೆಂಕಿ ಅವಘಡದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್ಎಸ್) ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ದೆಹಲಿ ಅಗ್ನಿಶಾಮಕ ಸೇವಾ ಅಧಿಕಾರಿಗಳು ಕಾರ್ಖಾನೆಯ ಆವರಣದಲ್ಲಿ ಮೂರು ಸುಟ್ಟ ಶವಗಳನ್ನು ಪತ್ತೆ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ. ಬೆಂಕಿಯನ್ನು ಎದುರಿಸಲು ಸ್ಥಳಕ್ಕೆ 22 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಪೇಂಟ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟವು ಭಾರಿ ಬೆಂಕಿಗೆ ಕಾರಣವಾಯಿತು ಎಂದು ವರದಿಗಳು ತಿಳಿಸಿವೆ. ಈ ಪ್ರದೇಶದಲ್ಲಿ ಅಗ್ನಿಶಾಮಕ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ದುರಂತದ ಪೂರ್ಣ ವ್ಯಾಪ್ತಿಯನ್ನು ಕಂಡುಹಿಡಿಯಲು ಪ್ರಸ್ತುತ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.