ಪ್ರಾದೇಶಿಕ ಪಕ್ಷಗಳೊಂದಿಗೆ ದೆಹಲಿಯಲ್ಲಿ ಸರ್ಕಾರ ರಚಿಸುತ್ತೇವೆ: ಮಮತಾ ಬ್ಯಾನರ್ಜಿ ಸ್ಫೋಟಕ ಹೇಳಿಕೆ

ಲೋಕಸಭಾ ಚುನಾವಣೆಯ ನಂತರ ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಚುನಾವಣೆಗಳು ಮುಗಿದ ನಂತರ, ಟಿಎಂಸಿ ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸುವ ಕಾರ್ಯತಂತ್ರವನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ನೀವು ನನ್ನೊಂದಿಗೆ ಇದ್ದರೆ ನಾನು ನಿಮ್ಮೊಂದಿಗೆ ಇರುತ್ತೇನೆ. ಚುನಾವಣೆಯ ನಂತರ ಪ್ರಾದೇಶಿಕ ಪಕ್ಷಗಳ ಸಹಾಯದಿಂದ ನಾವು ದೆಹಲಿಯನ್ನು ಗೆಲ್ಲುತ್ತೇವೆ ಎಂದು ನಾನು ಭರವಸೆ ನೀಡುತ್ತಿದ್ದೇನೆ. ಈ ಕುರಿತ ಮಾರ್ಗಗಳು ಮತ್ತು ನೀತಿಗಳನ್ನು ಪ್ರಾದೇಶಿಕ ಪಕ್ಷಗಳೊಂದಿಗೆ ಚರ್ಚಿಸಲಾಗುವುದು. ಆದರೆ ನಾನು ಸಿಪಿಐ (ಎಂ) ಜೊತೆ ಹೋಗಲು ಸಿದ್ಧನಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ತೃಣಮೂಲ ಮುಖ್ಯಸ್ಥೆ ಈಗಾಗಲೇ ಘೋಷಿಸಿದ್ದಾರೆ. ನಾಡಿಯಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳಲು ತಮ್ಮ ಪಕ್ಷ ಉತ್ಸುಕವಾಗಿದ್ದರೂ, ಹಳೆಯ ಪಕ್ಷವು ತನ್ನ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ಹೇಳಿದ್ದಾರೆ.