10:02 PM Thursday 21 - August 2025

ಯೂಟ್ಯೂಬ್ ನೋಡಿ ಆನ್ ಲೈನಲ್ಲಿ ಮಾಡಿದ್ರು ಎಮ್ಮೆಗೆ ಅರ್ಡರ್: ಹಣ ಕಳಿಸಿ ಮೋಸ ಹೋದ ಹೈನುಗಾರ

01/02/2024

ನೀವು ಆನ್ ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದಾಗ ಅದು ಸಮಯಕ್ಕೆ ಸರಿಯಾಗಿ ಬಾರದಿದ್ದಾಗ ನೀವು ಏನು ಮಾಡುತ್ತೀರಿ..? ಅಂತಹ ಸನ್ನಿವೇಶದಲ್ಲಿ ಗ್ರಾಹಕರ ಸಹಾಯವಾಣಿಯನ್ನು ಸಂಪರ್ಕಿಸುವುದು ಬಹುಶಃ ಏಕೈಕ ಆಯ್ಕೆಯಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಆನ್ ಲೈನ್ ನಲ್ಲಿ ಎಮ್ಮೆಗೆ ಆರ್ಡರ್ ಮಾಡಿದ ಹಾಲಿನ ವ್ಯಾಪಾರಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಯ್ ಬರೇಲಿಯ ಹೈನುಗಾರ ಸುನಿಲ್ ಕುಮಾರ್ ಯೂಟ್ಯೂಬ್ ನಲ್ಲಿ ಎಮ್ಮೆಯ ವಿಡಿಯೊ ನೋಡಿ ಆರ್ಡರ್ ಮಾಡಿದ್ದರು.

ಈ ವಿಡಿಯೊದಲ್ಲಿ ಉಲ್ಲೇಖಿಸಲಾದ ದೂರವಾಣಿ ಸಂಖ್ಯೆಗೆ ಕಿಸಾನ್ ಭಯ್ಯಾ ಡೈರಿ ಫಾರ್ಮ್ ಅನ್ನು ಸಂಪರ್ಕಿಸಿದ ಅವರು ಜೈಪುರ ಮೂಲದ ಉದ್ಯಮಿ ಶುಭಂ ಅವರೊಂದಿಗೆ ಮಾತನಾಡಿದ್ದಾರೆ. ಅವರು ಎಮ್ಮೆ ಉತ್ತಮ ತಳಿಯದ್ದು, ಪ್ರತಿದಿನ 18 ಲೀಟರ್ ಹಾಲು ಕೊಡುತ್ತದೆ ಎಂದು ಭರವಸೆ ನೀಡಿದ್ದರು. ತದನಂತರ ವ್ಯಾಪಾರಿ ಶುಭಂ ಎಂಬುವವರು ಕುಮಾರ್ ಅವರಿಗೆ ಎಮ್ಮೆಯ ವಿಡಿಯೊವನ್ನು ಕಳುಹಿಸಿದ್ದು, ಅದರ ಬೆಲೆ 55,000 ಎಂದು ತಿಳಿಸಿದ್ದಾರೆ. ಖರೀದಿಗೆ ಮುನ್ನ 10,000 ಮುಂಗಡ ಹಣ ನೀಡುವಂತೆ ಹೇಳಿದ್ದಾರೆ.

ಎಮ್ಮೆ ಖರೀದಿಸಲು ನಿರ್ಧರಿಸಿದ ಹಾಲಿನ ವ್ಯಾಪಾರಿ ತಕ್ಷಣ ಹಣ ವರ್ಗಾಯಿಸಿದ್ದಾರೆ. ಮರುದಿನ ಎಮ್ಮೆ ತಲುಪಿಸುವುದಾಗಿ ಹೇಳಿದ್ದರು. ಆದರೆ ಅದು ಬಾರದೇ ಇದ್ದಾಗ ಕುಮಾರ್ ಮಾರಾಟಗಾರನಿಗೆ ಮತ್ತೊಮ್ಮೆ ಕರೆ ಮಾಡಿದ್ದಾರೆ. ಆಗ 25,000 ವರ್ಗಾಯಿಸಲು ಕೇಳಲಾಯಿತು.

“ಆದರೆ ನಾನು ಮತ್ತೆ ಹೆಚ್ಚಿನ ಹಣ ಪಾವತಿಯನ್ನು ಮಾಡಲಿಲ್ಲ. ನಾನು ವಂಚನೆಗೆ ಬಲಿಯಾಗಿದ್ದೇನೆ ಎಂದು ಗೊತ್ತಾಯ್ತು. ಅವರು ಈಗ ನನ್ನ ಸಂಖ್ಯೆಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದಾರೆ” ಎಂದು ಹಾಲಿನ ವ್ಯಾಪಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಸಂಬಂಧ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ

Exit mobile version