4:50 AM Saturday 18 - October 2025

ದನ ಸಾಗಿಸುತ್ತಿದ್ದ ವಾಹನ ತಡೆದು ಇಬ್ಬರಿಗೆ ರಾತ್ರಿಯಿಡೀ ಹಲ್ಲೆ: ಡೈರಿ ನಿರ್ವಾಹಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

cow
18/06/2025

ಮಧ್ಯಪ್ರದೇಶ:  ದನ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ 25 ಜನರಿದ್ದ ಗುಂಪೊಂದು ನಡೆಸಿದ ಹಲ್ಲೆಯ ಪರಿಣಾಮ ಒಬ್ಬ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಡೈರಿ ನಿರ್ವಾಹಕ ಜುನೈದ್ ಖುರೇಷಿ(35) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಶ್ಯಾಮ್‌ ಪುರ ನಿವಾಸಿ ಅರ್ಮಾನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೆಹರ್ಗಾಂವ್ ಗ್ರಾಮದ ಬಳಿ ಖುರೇಷಿ ಮತ್ತು ಅರ್ಮಾನ್ ಪಿಕಪ್ ಟ್ರಕ್‌ ನಲ್ಲಿ ಏಳು ಹಸುಗಳು ಮತ್ತು ಒಂದು ಹೋರಿಯನ್ನು ಸಾಗಿಸುತ್ತಿದ್ದರು. ಸಾಂಚಿ ಮತ್ತು ರಾಯಸೇನ್ ನಡುವೆ 20ರಿಂದ 25 ಪುರುಷರ ಗುಂಪೊಂದು ವಾಹನವನ ತಡೆದು ರಾತ್ರಿಯಿಡೀ ಇಬ್ಬರನ್ನೂ ಥಳಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುನೈದ್ ಖುರೇಷಿ ಸಾವನ್ನಪ್ಪಿದ್ದು, ಅರ್ಮಾನ್ ಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಹೈನುಗಾರಿಕೆಗಾಗಿ ಹಸುಗಳನ್ನು ಸಾಗಿಸಲಾಗುತ್ತಿತ್ತು. ಗೋ ರಕ್ಷಣೆಯ ನೆಪದಲ್ಲಿ ಹಲ್ಲೆ ನಡೆಸಿದ ದಾಳಿಕೋರರು ಸುಮಾರು 2 ಲಕ್ಷ ರೂ.ಗಳನ್ನು ದೋಚಿದ್ದಾರೆ ಎಂದು ಕುಟುಂಬವು ಆರೋಪಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಲವಾರು ವ್ಯಕ್ತಿಗಳ ವಿರುದ್ಧ ಎಫ್‌ ಐಆರ್ ದಾಖಲಿಸಿದ್ದಾರೆ ಮತ್ತು ಕನಿಷ್ಠ ಮೂವರನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version