11:36 AM Thursday 21 - August 2025

ಸಹೋದರನ ಕೊಲೆಗೆ ಸುಪಾರಿ ನೀಡಿ, ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ!

police
16/02/2025

ಮಂಡ್ಯ:  ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ  ರೈತ ಕೃಷ್ಣೇಗೌಡ ಎಂಬವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಕೇಸ್ ಗೆ ಹೊಸ ತಿರುವು ಸಿಕ್ಕಿದ್ದು, ಆಸ್ತಿಗಾಗಿ ಮೃತ ಕೃಷ್ಣೇಗೌಡನ ಸಹೋದರನೇ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದು ಬಯಲಾಗಿದೆ.

ಫೆಬ್ರವರಿ 11ರಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ ಜಮೀನಿನ ಬಳಿ ಎಮ್ಮೆ ಕಟ್ಟಲು ಹೋಗಿದ್ದ ಕೃಷ್ಣೇಗೌಡ ಅವರನ್ನು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಹತ್ಯೆಯನ್ನು ತಡೆಯಲು ಬಂದಿದ್ದ ಸ್ಥಳೀಯರ ಮೇಲೆ ಕೂಡ ಲಾಂಗ್ ನಿಂದ ಹಲ್ಲೆ ನಡೆಸಲು ಯತ್ನಿಸಿದ್ದರು.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಕೃಷ್ಣೇಗೌಡನ ಸಹೋದರ ಶಿವನಂಜೇಗೌಡ ಹಾಗೂ ಸುಪಾರಿ ಪಡೆದುಕೊಲೆ ಮಾಡಿದ್ದ ಚಂದ್ರಶೇಖರ್, ಸುನೀಲ್, ಉಲ್ಲಾಸ್, ಪ್ರತಾಪ್, ಅಭಿಷೇಕ್, ಶ್ರೀನಿವಾಸ, ಕನಕಪುರ ಮೂಲದ ಹನುಮೇಗೌಡ ಎಂಬ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕೃಷ್ಣೇಗೌಡ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲದ ಹಣವನ್ನು ಸಹೋದರ ಶಿವನಂಜೇಗೌಡ ತೀರಿಸಿ, ಜಮೀನನ್ನು ಆತನ ಪತ್ನಿಯ ಹೆಸರಿಗೆ ಬರೆಸಿಕೊಂಡಿದ್ದ.  ಜಮೀನು ಬರೆದುಕೊಟ್ಟರೂ ತನ್ನ ಸಹೋದರ ಶಿವನಂಜೇಗೌಡನಿಗೆ ಕೃಷ್ಣೇಗೌಡ ಜಮೀನು ಬಿಟ್ಟುಕೊಟ್ಟಿರಲಿಲ್ಲ. ಜೊತೆಗೆ ತನ್ನ ಸಹೋದರಿಯನ್ನು ಶಿವನಂಜೇಗೌಡನ ವಿರುದ್ಧ ಎತ್ತಿಕಟ್ಟಿ ಕೇಸ್ ಹಾಕಿಸಿದ್ದ. ಇದೇ ಕೋಪದಲ್ಲಿ  ತಾನು ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಮದನಹಟ್ಟಿಯಮ್ಮ ದೇವಸ್ಥಾನಕ್ಕೆ ಬರುತ್ತಿದ್ದ ಚಂದ್ರಶೇಖರ್ ಎಂಬಾತನಿಗೆ 2 ತಿಂಗಳ ಹಿಂದೆ 5 ಲಕ್ಷ ರೂ. ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದರನಿಗೆ ಮುಹೂರ್ತ ಇಟ್ಟು ಕುಂಭಮೇಳಕ್ಕೆ ಹೋದ ಶಿವನಂಜೇಗೌಡ!

ಕೃಷ್ಣೇಗೌಡನ ಹತ್ಯೆಯಿಂದ ತನ್ನ ಮೇಲೆ ಅನುಮಾನ ಬರಬಾರದು ಎನ್ನುವ ನಿಟ್ಟಿನಲ್ಲಿ ಶಿವನಂಜೇಗೌಡ,  ಹತ್ಯೆ ನಡೆಯುವ ಹಿಂದಿನ ದಿನವೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದು, ಪುಣ್ಯ ಸ್ನಾನ ಮಾಡಿದ್ದ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version