ಮಂಗಳೂರು | ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ
ಮಂಗಳೂರು: ಮಹಾಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ, ವಿಶ್ವನಾಯಕ ಡಾ.ಬಿ.ಆರ್.ಅಂಬೇಡ್ಕರ್ ರವರ 69 ನೇ “ಪರಿನಿಬ್ಬಾಣ ದಿನ”ವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ–ದ.ಕ. ಜಿಲ್ಲಾ ಮಹಿಳಾ ಸಮಿತಿಯ ವತಿಯಿಂದ ದ.ಸಂ.ಸ. ಜಿಲ್ಲಾ ಕಚೇರಿಯಲ್ಲಿ ನಡೆಸಿ ವಿಶ್ವ ನಾಯಕನಿಗೆ ಗೌರವ ಸಲ್ಲಿಸಲಾಯಿತು.
ದಲಿತ ನೌಕರರ ಒಕ್ಕೂಟದ ಜಿಲ್ಲಾ ಉಸ್ತುವಾರಿ ಹೆಚ್.ಡಿ.ಲೋಹಿತ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿ, ಅಂಬೇಡ್ಕರ್ ರವರು ವಿಶ್ವ ಒಪ್ಪಿದ ನಾಯಕ. ಅವರು ತನ್ನ ಜೀವಮಾನದುದ್ದಕ್ಕೂ ಸ್ವಾರ್ಥಕ್ಕಾಗಿ ಏನನ್ನೂ ಯೋಚಿಸದೇ ಶೋಷಿತರ ಪರವಾಗಿ ಯೋಚಿಸಿದ್ದರು. ಆ ಕಾರಣಕ್ಕಾಗಿಯೇ ಇಂದಿಗೂ ಅವರು ವಿಶ್ವಮಾನ್ಯರಾಗಿದ್ದಾರೆ. ಅಂಬೇಡ್ಕರ್ ಅವರ ಹೋರಾಟದ ಫಲವನ್ನು ಉಣ್ಣುತ್ತಿರುವ ಸಮುದಾಯದ ಕೆಲ ನೌಕರರು ಇಂದು ಸಮುದಾಯ ಹಾಗೂ ಅಂಬೇಡ್ಕರ್ ಅವರನ್ನೇ ಮರೆತು ಸ್ವಾರ್ಥಿಗಳಾಗುತ್ತಿರುವುದು ದುರಂತ. ಶೋಷಿತ ಸಮುದಾಯವು ಈ ದೇಶದ ಆಳುವ ವರ್ಗವಾಗುವುದನ್ನು ಕಣ್ಣಾರೆ ನೋಡಬೇಕೆನ್ನುವ ಅಂಬೇಡ್ಕರ್ ಅವರ ಕೊನೆಯ ಆಸೆ ಈವರೆಗೂ ಈಡೇರಲೇ ಇಲ್ಲ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಒಗ್ಗಟ್ಟಾಗಿ ಈ ದೇಶವನ್ನು ಆಳುವ ವರ್ಗಗಳಾಗುವಲ್ಲಿ ನಾವೆಲ್ಲಾ ಚಿಂತಿಸಬೇಕಾಗಿದೆ ಎಂದರು.
ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ ಮಾತನಾಡಿ ” ಇಡೀ ವಿಶ್ವದಲ್ಲಿಯೇ ಮಹಿಳೆಯರ ಆತ್ಮಗೌರವ, ಹಕ್ಕುಗಳ ಬಗ್ಗೆ ಧ್ವನಿಯೆತ್ತಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಕಾನೂನು ಮಂತ್ರಿಯಾಗಿದ್ದಾಗ ಮಹಿಳೆಯರ ಶೋಷಣೆಯ ಬಗ್ಗೆ ಪಾರ್ಲಿಮೆಂಟಿನಲ್ಲಿ ಸುದೀರ್ಘವಾಗಿ ಮಾತನಾಡಿ, ಕಾನೂನಿನ ಮುಖಾಂತರ ಮಹಿಳಾ ಶೋಷಣೆಗೆ ಮುಕ್ತಿ ಕೊಡಿಸಿದ ಮಹಾನಾಯಕ. ಹಾಗಾಗಿ ಮಹಿಳಾ ಸಮುದಾಯವು ಖಂಡಿತವಾಗಿಯೂ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲೇ ಬೇಕು” ಎಂದರು.
ಜಿಲ್ಲಾ ದಲಿತ ಕಲಾ ಮಂಡಳಿ ಸಂಚಾಲಕ ಕಮಲಾಕ್ಷ ಬಜಾಲ್, ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕಿ ಗಿರಿಜಾ ನಾಗೇಶ್ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























