10:27 PM Saturday 23 - August 2025

ಮಂಗಳೂರು: ಸಾಮಾಜಿಕ ಚಳವಳಿಯೊಂದಿಗೆ ದಿ.ಭಾಸ್ಕರ್ ಎಂ.– ಒಂದು ನೆನಪು ಕಾರ್ಯಕ್ರಮ

bhaskar
26/05/2024

ಮಂಗಳೂರು: ದಲಿತ ಚಳವಳಿಯ ಹಿರಿಯ ನಾಯಕ, ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕರೂ ಆಗಿದ್ದ ದಿವಂಗತ ಭಾಸ್ಕರ್ ಎಂ. ಇವರ ಪರಿನಿಬ್ಬಾಣ ದಿನದ ನೆನಪಿನೊಂದಿಗೆ ” ಸಾಮಾಜಿಕ ಚಳವಳಿಯೊಂದಿಗೆ ದಿ.ಭಾಸ್ಕರ್. ಎಂ.-ಒಂದು ನೆನಪು ಕಾರ್ಯಕ್ರಮವನ್ನು  ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ -ದ. ಕ.ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನ ಎನ್.ಜಿ. ಓ.ಡಿ. ‘ಗ್ರೂಪ್ ನೌಕರರ ಭವನದಲ್ಲಿ ನಡೆಸಲಾಯಿತು.

ದಿ.ಭಾಸ್ಕರ್. ಎಂ. ಇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ   ದಲಿತ ಹಕ್ಕುಗಳ ನಾಗರೀಕ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಚಂದ್ರಕುಮಾರ್ “ದಿ.ಭಾಸ್ಕರ್ ಎಂ. ರವರು ಈ ಜಿಲ್ಲೆಯಲ್ಲಿ ಸಂಘಟನೆಯ ಆರಂಭಿಕ ಹಂತದಿಂದಲೂ  ತಳ ಮಟ್ಟದ ಕಾರ್ಯಕರ್ತರಾಗಿ, ಹಳ್ಳಿಹಳ್ಳಿಗೆ ಸಂಚರಿಸಿ ಹಂತ ಹಂತವಾಗಿ ಸಂಘಟನೆಯನ್ನು ಕಟ್ಟಿ ಬೆಳೆಸಿದವರಲ್ಲಿ ಒಬ್ಬರು. ಕಡಿಮೆ ವಿದ್ಯಾಭ್ಯಾಸ ಇದ್ದರೂ ತನ್ನ ಅಪಾರ ಬುದ್ಧಿ ಶಕ್ತಿ, ಜ್ಞಾನದಿಂದ  ಜನರಲ್ಲಿ ಸಂಘಟನೆಯ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸಂಘಟನೆಯನ್ನು ಕಟ್ಟುವಲ್ಲಿ ಅವರ ಶ್ರಮವನ್ನು ನಾವು ಎಂದಿಗೂ ಮರೆಯಬಾರದು ಎಂದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಾನಂದ ಡಿ. ಯವರು ಪ್ರಾಸ್ತಾವಿಕವಾಗಿ ಮಾತನಾಡಿ ” ಭಾಸ್ಕರ್ ರವರು ಓರ್ವ ಬಹುಮುಖ ವ್ಯಕ್ತಿತ್ವವುಳ್ಳವರಾಗಿದ್ದು, ಸಾಕ್ಷರತಾ ಅಭಿಯಾನದಲ್ಲಿ ಪ್ರೇರಕರಾಗಿ, ಸಹಕಾರಿ ಕ್ಷೇತ್ರದಲ್ಲಿ ಎರಡು ಅವಧಿಗೆ ನಿರ್ದೇಶಕರಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಉತ್ತಮ ಯೋಗ ಪಟುವಾಗಿ,ಜಿಲ್ಲೆಯ ಓರ್ವ ಪ್ರಖ್ಯಾತ ನಾದಸ್ವ ರ(ನಾಗಸ್ವರ) ವಾದಕರಾಗಿ, ಸಂಘಟನೆಯಲ್ಲಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಸಂಘಟನಾ ಸಂಚಾಲಕರಾಗಿ, 5 ಬಾರಿ ಯಶಸ್ವಿಯಾಗಿ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸುವ ಮೂಲಕ ತನಗೆ ನೀಡಿರುವ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದವರು. ಇಂತಹ ವ್ಯಕ್ತಿಗಳು ನಮಗೆ ಹಾಗೂ ಹೊಸ ನಾಯಕತ್ವಕ್ಕೆ ಎಂದಿಗೂ ಸ್ಫೂರ್ತಿ ಎಂದರು.

ಜಿಲ್ಲಾ ಸಂಚಾಲಕರಾದ ರಘು. ಕೆ. ಎಕ್ಕಾರು ಅವರು ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡಿ ” ಜಿಲ್ಲೆಯಲ್ಲಿ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಹಲವಾರು ನಾಯಕರ ತ್ಯಾಗ, ಪರಿಶ್ರಮವಿದೆ. ಅವರಲ್ಲಿ ಹಲವಾರು ಮಂದಿ ಇಂದು ನಮ್ಮೊಂದಿಗಿಲ್ಲ, ಆದರೆ ಸಂಘಟನೆಗೆ ಅವರು ಕೊಟ್ಟ ಕೊಡುಗೆ,ತ್ಯಾಗ,ಪರಿಶ್ರಮವನ್ನು ಮುಂದಿನ ನಮ್ಮ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ. ದಿ!ಭಾಸ್ಕರ್ ರವರು ಇಂದು ನಮ್ಮೊಂದಿಗಿಲ್ಲ, ಆದರೆ ಅವರು ಸಂಘಟನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಭಾಸ್ಕರ್ ರವರು ಇಂದು ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಸಂಘಟನೆಗೆ ಅವರು ನೀಡಿದ ಅಪಾರ ಕೊಡುಗೆಯಿಂದಾಗಿ ಅವರು ಸದಾ ಸಂಘಟನೆಯ ಭಗವಾಗಿಯೇ ನಮ್ಮೊಂದಿಗೆ ನಿರಂತರವಾಗಿ ಇರುತ್ತಾರೆ ಹಾಗೂ ಅಂತಹ ನಾಯಕರನ್ನು ಸಂಘಟನೆಯು ನೆನೆಪಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಪ್ರತೀ ವರ್ಷವೂ ನಡೆಸಲಿದೆ ಎಂದರು.

ವೇದಿಕೆಯಲ್ಲಿ ದ. ಸಂ. ಸ. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ,ಜಿಲ್ಲಾ ಸಂಘಟನಾ ಸಂಚಾಲಕರಾದ ಲಕ್ಷ್ಮಣ್ ಕಾಂಚನ್, ಕರಂಬಾರು ಗ್ರಾಮ ಸಂಚಾಲಕ ರುಕ್ಕಯ್ಯ ಕರಂಬಾರ್, ಜೀವ ನಿಧಿ ಟ್ರಸ್ಟ್ ಬಜ್ಪೆ ಇದರ ನಿರ್ದೇಶಕ ಜಯಂತ್, ದಿ!ಭಾಸ್ಕರ್. ಎಂ. ಇವರ ಮಗ ಹರೀಶ್. ಎಂ.ಬಿ., ಮಗಳು ತಾರಾ. ಎಂ.ಬಿ.ಇವರುಗಳು ಭಾಸ್ಕರ್. ಎಂ. ಇವರ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದರು , ಜಿಲ್ಲಾ ಸಂಘಟನಾ ಸಂಚಾಲಕರಾದ ರಾಜಯ್ಯ ಮಂಗಳೂರು,ಕಮಲಾಕ್ಷ ಬಜಾಲ್,ಬಾಲು ಕುಂದರ್, ನಾಗೇಶ್ ಚಿಲಿಂಬಿ,ರಾಮದಾಸ್ ಮೇರೆಮಜಲು, ದಲಿತ ಕಲಾ ಮಂಡಳಿ ಸಂಚಾಲಕ ಸಂಕಪ್ಪ ಕಾಂಚನ್, ತಾಲೂಕು ಸಂಘಟನಾ ಸಂಚಾಲಕರಾದ ರವಿ ಪೇಜಾವರ, ಕೃಷ್ಣ. ಕೆ. ಎಕ್ಕಾರು, ದೊಂಬಯ್ಯ ಕಟೀಲು,ಗೀತಾ ಕರಂಬಾರು, ಸೀತಾ ಪೇಜಾವರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ದಲಿತ ಕಲಾ ಮಂಡಳಿ ವತಿಯಿಂದ ದಿವಂಗತ ಭಾಸ್ಕರ್. ಎಂ. ಇವರ ಸಂಘಟನೆಯ ವಿಚಾರದ ಕ್ರಾಂತಿ ಗೀತೆಯನ್ನು ಹಾಡಲಾಯಿತು.

ಕೃಷ್ಣ. ಕೆ. ಎಕ್ಕಾರು ಕಾರ್ಯಕ್ರಮ ನಿರ್ವಹಿಸಿ, ರವಿ ಪೇಜಾವರ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಮೇ 30 ರಂದು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ “ಹಾಸನ ಚಲೋ “ಕಾರ್ಯಕ್ರಮದ ಪೋಸ್ಟರ್ ನ್ನು ಬಿಡುಗಡೆಗೊಳಿಸಿ ಬೆಂಬಲ ಸೂಚಿಸಲಾಯಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version