ಮಣಿಪುರದಲ್ಲಿ ಗುಂಡಿನ ದಾಳಿ ಪ್ರಕರಣ: ಪ್ರಮುಖ ಆರೋಪಿ ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷ ಅರೆಸ್ಟ್

24/10/2023

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 14ರಂದು ಇಂಫಾಲ್‌ನಲ್ಲಿ ನಡೆದ ಗುಂಡಿನ ದಾಳಿಯ ಪ್ರಮುಖ ಆರೋಪಿ ಎಂದು ಮಣಿಪುರ ರಾಜ್ಯ ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷ ಎಂ ಬರೀಶ್ ಶರ್ಮಾ ಎಂಬುವವರನ್ನು ಗುರುತಿಸಲಾಗಿತ್ತು.

ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ಐವರು ಗಾಯಗೊಂಡಿದ್ದರು. ಇಂಫಾಲ್ ಪಶ್ಚಿಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ  ಆರೋಪಿಯನ್ನು ಹಾಜರುಪಡಿಸಲಾಗಿದ್ದು, ಆರೋಪಿಯನ್ನು ಅಕ್ಟೋಬರ್ 25 ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.
ಅಕ್ಟೋಬರ್ 14 ರ ರಾತ್ರಿ ಇಂಫಾಲ್ ಪಶ್ಚಿಮ ಜಿಲ್ಲೆಯ ಕ್ವಾಕಿಥೆಲ್ ಕೊಂಜೆಂಗ್ ಲೈಕೈ ಎಂಬಲ್ಲಿ ಒಬ್ಬ ವ್ಯಕ್ತಿಯನ್ನು ಅಪಹರಿಸಲು ಸುಮಾರು 20 ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬಂದಿದ್ದು, ಅವರನ್ನು ಎದುರಿಸಿದ್ದ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇದರಲ್ಲಿ ಒಬ್ಬ ಮಹಿಳೆ ಸೇರಿದಂತೆ ಐವರು ಗಾಯಗೊಂಡಿದ್ದರು.

 

ಕೊಲೆ ಯತ್ನ, ಕ್ರಿಮಿನಲ್ ಬೆದರಿಕೆ ಮತ್ತು ಕರ್ಫ್ಯೂ ಉಲ್ಲಂಘನೆಯ ಆರೋಪದ ಮೇಲೆ ಶರ್ಮಾ ಅವರನ್ನು ಬಂಧಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿಯೂ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಮೈತೆಯಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಮೇ ತಿಂಗಳಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಭುಗಿಲೆದ್ದಿತು. ಜನಾಂಗೀಯ ಸಂಘರ್ಷ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಸುಮಾರು 60,000 ಜನರು ತಮ್ಮ ಮನೆಗಳನ್ನು ತೊರೆಯುವಂತೆ ಒತ್ತಾಯಿಸಲಾಗಿತ್ತು.

ಇತ್ತೀಚಿನ ಸುದ್ದಿ

Exit mobile version