ಶಾಲೆ ಮುಂದೆ ಬಿಯರ್ ಕುಡಿದು ಬಾಟಲಿ ರಸ್ತೆಗೆಸೆದ ದುಷ್ಕರ್ಮಿಗಳು: ಪ್ರಶ್ನಿಸಿದ ಯುವಕನ ಬರ್ಬರ ಹತ್ಯೆ

ಉಳ್ಳಾಲ: ಶಾಲೆಯ ಮುಂದೆ ಬಿಯರ್ ಕುಡಿದು, ಬಾಟಲಿಯನ್ನು ರಸ್ತೆಗೆಸೆದ ದುಷ್ಕರ್ಮಿಗಳನ್ನು ಪ್ರಶ್ನಿಸಿದ್ದಕ್ಕೆ ಯುವಕನೋರ್ವನನ್ನು ಹರಿತವಾದ ಆಯುಧದಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯ ಶಾಲೆಯೊಂದರ ಬಳಿಕ ಬುಧವಾರ ನಡೆದಿದೆ.
ಕೊಲ್ಯ ಸಾರಸ್ವತ ಕಾಲನಿ ನಿವಾಸಿ ವರುಣ್ ಗಟ್ಟಿ(28) ಹತ್ಯೆಗೀಡಾದ ಯುವಕನಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಸೂರಜ್ ಹಾಗೂ ರವಿರಾಜ್ ಎಂಬವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಲೆಯ ಕಟ್ಟೆಯಲ್ಲಿ ಕುಳಿತಿದ್ದ ಸೂರಜ್ ಮತ್ತು ರವಿರಾಜ್ ಬಿಯರ್ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದಾರೆ. ಇದನ್ನು ಗಮನಿಸಿದ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿದ್ದು, ಒಂದು ಹಂತದಲ್ಲಿ ಆರೋಪಿಗಳು ವರುಣ್ ನ ಬೆನ್ನಿಗೆ ಹರಿತವಾದ ಆಯುಧದಿಂದ ಚುಚ್ಚಿದ್ದಾರೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ವರುಣ್ ನನ್ನು ತಕ್ಷಣವೇ ಸ್ನೇಹಿತರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.