ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ: ಪತಿ ಹಾಗೂ ಮಗುವಿನೊಂದಿಗೆ ತೆರಳುತ್ತಿದ್ದ ಮಹಿಳೆಯ ದುರಂತ ಸಾವು

14/12/2023
ಬೆಂಗಳೂರು: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿದ್ದ ಮೃತ ಮಹಿಳೆಯ ಪತಿ ಹಾಗೂ ಮಗು ಅಪಾಯದಿಂದ ಪಾರಾಗಿದ್ದಾರೆ.
ನಿನ್ನೆ ಸಂಜೆ 6:30ರ ವೇಳೆಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪ ಮಡಿವಾಳ ಪ್ಲೈ ಓವರ್ ಮೇಲೆ ಅಪಘಾತ ಸಂಭವಿಸಿದೆ. ಬಿಎಂಟಿಸಿ ಚಾಲಕನ ಅಜಾಗರೋಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಪತ್ನಿ ಸೀಮಾ, ಪತಿ ಗುರುಮೂರ್ತಿ ಹಾಗೂ ಅವರ ಒಂದೂವರೆ ವರ್ಷ ವಯಸ್ಸಿನ ಮಗು ಗಾನವಿ ಜೊತೆಯಾಗಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಸೀಮಾ ಅವರು ಬಸ್ಸಿನ ಚಕ್ರದಡಿಗೆ ಸಿಲುಕಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಗುರುಮೂರ್ತಿ ಹಾಗೂ ಮಗು ಗಾನವಿ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಅಪಘಾತದ ವೇಳೆ ಬಸ್ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ಪಾರಾರಿಯಾಗಿದ್ದಾರೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.