ನೀಟ್ ಪರೀಕ್ಷೆ ಕರ್ಮಕಾಂಡ: 23 ವಿದ್ಯಾರ್ಥಿಗಳ ಸಾವಿನ ನೈತಿಕ ಹೊಣೆ ಪ್ರಧಾನಿ ಮೋದಿ ಸರ್ಕಾರ ಹೊತ್ತುಕೊಳ್ಳಬೇಕು: ದಿನೇಶ್ ಮುಳೂರು

dinesh muluru.jpg
26/06/2026

ಮಂಗಳೂರು: ನೀಟ್ ಪರೀಕ್ಷೆಯಲ್ಲಿನ ಅವ್ಯವಸ್ಥೆ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ವ್ಯವಸ್ಥೆಯ ವೈಫಲ್ಯದಿಂದ ದೇಶದ ವಿದ್ಯಾರ್ಥಿಗಳ ಬದುಕು ಕತ್ತಲೆಯತ್ತ ತಳ್ಳಲ್ಪಟ್ಟಿದೆ. ಈ ಬೆಳವಣಿಗೆಗಳ ನೈತಿಕ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ದಿನೇಶ್ ಮುಳೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವೈದ್ಯಕೀಯ ಶಿಕ್ಷಣದ ಕನಸು ಕಂಡು ವರ್ಷಗಳ ಕಾಲ ಶ್ರಮಪಟ್ಟ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ಹಾಳು ಮಾಡಿವೆ. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಹಾಗೂ ಆಡಳಿತಾತ್ಮಕ ವೈಫಲ್ಯಗಳಿಂದ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ವಿವಿಧ ವರದಿಗಳ ಪ್ರಕಾರ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ದೇಶವೇ ತಲೆತಗ್ಗಿಸುವಂತಹ ದುರಂತವಾಗಿದೆ ಎಂದು ಹೇಳಿದರು.

ದೇಶದಾದ್ಯಂತ ನೀಟ್ ಪರೀಕ್ಷೆಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇನ್ನೂ ಮೌನ ವಹಿಸಿರುವುದು ಅತ್ಯಂತ ಖಂಡನೀಯ. ವಿದ್ಯಾರ್ಥಿಗಳ ಜೀವಕ್ಕಿಂತ ಸರ್ಕಾರದ ಪ್ರತಿಷ್ಠೆ ಮುಖ್ಯವೇ ಎಂಬ ಪ್ರಶ್ನೆ ದೇಶದ ಜನತೆಯಲ್ಲಿ ಮೂಡಿದೆ ಎಂದು ಅವರು ಕಿಡಿಕಾರಿದರು.

ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಕಲಿ ಅಭ್ಯರ್ಥಿಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಂಘಟಿತ ಅಕ್ರಮಗಳ ಆರೋಪಗಳು ಬಹಿರಂಗವಾಗಿದ್ದರೂ ತಪ್ಪಿತಸ್ಥರ ವಿರುದ್ಧ ತ್ವರಿತ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಈ ಗಂಭೀರ ವೈಫಲ್ಯದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ಅಲ್ಲದೆ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಸಿ, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದ ಪ್ರತಿಯೊಬ್ಬ ತಪ್ಪಿತಸ್ಥನಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ದೇಶದ ಯುವಜನರ ಕನಸುಗಳನ್ನು ನಾಶಮಾಡುವ ಯಾವುದೇ ವ್ಯವಸ್ಥೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ದಿನೇಶ್ ಮುಳೂರು ಎಚ್ಚರಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version