ಇಬ್ಬರು ಮಕ್ಕಳನ್ನು ಕೊಂದು ಜೈಲು ಸೇರಿದ್ದ ತಾಯಿ, ಜೈಲಿನಲ್ಲಿ ಸಾವಿಗೆ ಶರಣು

ಬೆಂಗಳೂರು: ತನ್ನ ಇಬ್ಬರು ಮಕ್ಕಳನ್ನು ಅಮಾನವೀಯವಾಗಿ ಕೊಂದು ಜೈಲು ಸೇರಿದ್ದ ಆರೋಪಿ ತಾಯಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.
ಗಂಗಾದೇವಿ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯಾಗಿದ್ದಾರೆ. ಏಪ್ರಿಲ್ 9ರ ಮಂಗಳವಾರ ರಾತ್ರಿ ಜಾಲಹಳ್ಳಿಯಲ್ಲಿ ಆಂಧ್ರಪ್ರದೇಶ ಮೂಲದ ಗಂಗಾದೇವಿ ತನ್ನ 7 ವರ್ಷದ ಮಗಳು ಮತ್ತು 9 ವರ್ಷದ ಮಗನನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಳು. ಬಳಿಕ ಪೊಲೀಸರಿಗೆ ಶರಣಾಗಿದ್ದಳು.
ಆರೋಪಿ ಮಹಿಳೆಯನ್ನು ಗುರುವಾರ (ಏಪ್ರಿಲ್ 11) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಅದೇ ದಿನ ರಾತ್ರಿ ಗಂಗಾದೇವಿ ಶೌಚಾಲಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
“ಗಂಗಾದೇವಿ ಜೈಲು ಸೇರಿದ ಕೆಲವೇ ಗಂಟೆಗಳ ನಂತರ, ಸಾವಿಗೆ ಶರಣಾಗಿದ್ದಾಳೆ. ಆಕೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಗಂಗಾದೇವಿ ಕೆಲವು ದಿನಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರು. ಹೀಗಾಗಿ ತನ್ನ ಸ್ವಂತ ಮಕ್ಕಳನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಳು ಎಂದು ಹೇಳಲಾಗಿದೆ. ಜಾಲಹಳ್ಳಿ ಪ್ರದೇಶದ ಖಾಸಗಿ ಕಂಪನಿಯಲ್ಲಿ ಗಂಗಾದೇವಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಗಂಗಾದೇವಿಯ ಪತಿಯನ್ನು ತನ್ನ ಸ್ವಂತ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಈಗಾಗಲೇ ಬಂಧಿಸಲಾಗಿದೆ. ಆತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth