ಮೈಸೂರು | ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆ: ಮೂವರು ವಶಕ್ಕೆ

ಮೈಸೂರು: ಭ್ರೂಣ ಪತ್ತೆ ಹಾಗೂ ಹತ್ಯೆ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದು, ವರದಿಗಳ ಪ್ರಕಾರ, ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಈ ಕೃತ್ಯದಲ್ಲಿ ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂವೊಂದರ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
ಮೈಸೂರು ತಾಲ್ಲೂಕು ಮೆಲ್ಲಹಳ್ಳಿ ಗ್ರಾಮದ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ವೇಳೆ ಮನೆಯಲ್ಲಿ ಹಣಕಾಸಿನ ಡೈರಿ ಪತ್ತೆಯಾಗಿತ್ತು. ಅದರಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರವನ್ನು ಬರೆದಿಡಲಾಗಿತ್ತು. ಭ್ರೂಣ ಲಿಂಗ ಪತ್ತೆಗೆ 25 ಸಾವಿರ ಮತ್ತು ಹೆಣ್ಣು ಭ್ರೂಣವನ್ನು ಹತ್ಯೆ ಮಾಡಲು 30 ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಕೃತ್ಯ ನಡೆಯುತ್ತಿದ್ದ ಐಶಾರಾಮಿ ಬಂಗಲೆಯಲ್ಲಿ ಕಬ್ಬಿಣದ ಲಾಕರ್ ನಲ್ಲಿ 3 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಸ್ಥಳದಲ್ಲಿ ಭ್ರೂಣ ಹತ್ಯೆಗೆ ಬೇಕಾದ ಕಿಟ್ ಗಳು, ಔಷಧಿಗಳು ಪತ್ತೆಯಾಗಿದ್ದು, ಎಲ್ಲವನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಡಿಡಿ ವಿವೇಕ್ ದೊರೈ, ಮಂಡ್ಯ ಡಿಹೆಚ್ ಓ ಮೋಹನ್ ಹಾಗೂ ಮೈಸೂರು ಡಿಹೆಚ್ ಓ ಕುಮಾರಸ್ವಾಮಿ, ಮಂಡ್ಯ ಕುಟುಂಬ ಕಲ್ಯಾಣ ಅಧಿಕಾರಿ ಬೆಟ್ಟಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಇಬ್ಬರು ಗರ್ಭಿಣಿಯವರು ಕಂಡುಬಂದಿದ್ದು, ಅವರು ಕೂಡ ಭ್ರೂಣ ಲಿಂಗ ಪತ್ತೆಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಸದ್ಯ ವರುಣ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD