ನಾಯಕರ ಹತ್ಯೆಯಾಗ್ತಿಲ್ಲ, ಸಂಘಟನೆ ಹೆಸರಲ್ಲಿ ಯುವಕರನ್ನು ದುರುಪಯೋಗವಾಗ್ತಿದೆ: ಕುಮಾರಸ್ವಾಮಿ
ಮಂಗಳೂರು: ಎರಡು ಮೂರು ವರ್ಷದಿಂದ ದಕ್ಷಿಣಕನ್ನಡ ಜಿಲ್ಲಾ ಪ್ರವಾಸಕ್ಕೆ ಬಂದಿಲ್ಲ, ಕರಾವಳಿಯಲ್ಲಿ ನಡೆದ ಹತ್ಯೆ ವಿಷಯದಲ್ಲಿ ಚರ್ಚೆ ಮಾಡೋಕೆ ಬರುತ್ತೇನೆಂದು ಅಂದುಕೊಂಡಿರಲಿಲ್ಲ, ಇದು ನನಗೆ ನೋವು ತಂದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯ ಹಲವು ಸಮಯದಿಂದ ನಡೆಯುತ್ತಿದೆ. ಸಣ್ಣಪುಟ್ಟ ಪ್ರಕರಣಗಳನ್ನು ಇಲ್ಲಿ ದೊಡ್ಡದಾಗಿ ಮಾಡಲಾಗುತ್ತಿದೆ. ಹಿಂದೂ ಮುಸ್ಲಿಂ ಸಮಾಜದ ನಡುವೆ ಕಂದಕ ಸೃಷ್ಟಿ ಮಾಡಿದ್ದಾರೆ. ಬೇರೆ ರಾಜಕಾರಣಿಗಳ ತರ ನಾನು ಫ್ಲೈಯಿಂಗ್ ವಿಸಿಟ್ ಮಾಡಿಲ್ಲ. ಮೂರು ಕುಟುಂಬಗಳಿಂದ ಮಾಹಿತಿ ಪಡೆದು ಬಂದಿದ್ದೇನೆ.
ಹತ್ಯೆ ನಡೆಸಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಮೂರು ಕುಟುಂಬದ ಒಕ್ಕೊರಳಿನ ಆಗ್ರಹವಾಗಿದೆ.ಯಾವ ರಾಜಕಾರಣಿ, ಮಂತ್ರಿ, ಸಂಘಟನೆ ಮುಂಚೂಣಿಯಲ್ಲಿದ್ದ ನಾಯಕರ ಹತ್ಯೆಯಾಗಿಲ್ಲ. ಸಂಘಟನೆ ಹೆಸರಲ್ಲಿ ಯುವಕರನ್ನು ದುರುಪಯೋಗ ಮಾಡಲಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ಶಾಸಕರನ್ನು ಇಲ್ಲಿ ಹಲವು ವರ್ಷಗಳಿಂದ ಆಯ್ಕೆ ಮಾಡಿದ್ದಾರೆ.
ಕಾನೂನಿನ ವೈಫಲ್ಯದ ಬಗ್ಗೆ ಈಗ ಕಾಂಗ್ರೆಸ್ ಚರ್ಚೆ ಮಾಡುತ್ತಿದೆ. ನಿಮ್ಮ ಸರ್ಕಾರ ಇದ್ದಾಗ ಕರಾವಳಿಗೆ ಕೊಟ್ಟ ಕೊಡುಗೆ ಏನು? ಇಲ್ಲಿನ ಜನರಿಗೆ ಯಾವ ರಕ್ಷಣೆ ನೀಡಿದ್ದೀರಿ? ಈಗ ಬಿ.ಜೆ.ಪಿ ಯ ಮಂತ್ರಿಗಳು ಯಾವು ಕೊಡುಗೆ ನೀಡಿದ್ದೀರಿ?
ಮುಖ್ಯಮಂತ್ರಿಗಳು ಇಲ್ಲಿ ಬಂದು ಏನು ಸಾಧನೆ ಮಾಡಿ ಹೋದ್ರು? ಎರಡು ಸಮಾಜದಲ್ಲಿ ವಿಶ್ವಾಸ ಮೂಡಿಸುವ ಸಂದೇಶ ಕೊಡಬಹುದೆಂದು ಅಂದುಕೊಂಡಿದ್ದೆ. ಆದ್ರೆ ಈ ವಿಶ್ವಾಸ ಹುಸಿಯಾಯಿತು. ಪ್ರವೀಣ್ ಕುಟುಂಬಕ್ಕೆ ಎಷ್ಟು ಪರಿಹಾರ ಕೊಟ್ಟರು ತಕರಾರಿಲ್ಲ. ಮುಖ್ಯಮಂತ್ರಿ ಇಲ್ಲಿದ್ದಾಗಲೇ ಸುರತ್ಕಲ್ ನಲ್ಲಿ ಹತ್ಯೆ ನಡೆದಿದೆ. ಮುಖ್ಯಮಂತ್ರಿ ಅಲ್ಲಿಗೂ ಭೇಟಿ ನೀಡಿ ವಿಶ್ವಾಸ ತುಂಬಬೇಕಿತ್ತು. ಆದ್ರೆ ಹತ್ಯೆಯಾದಲ್ಲಿಗೆ ಸಿ.ಎಂ ಭೇಟಿ ನೀಡಿಲ್ಲ. ಯಾರನ್ನು ಮೆಚ್ಚಿಸುವುದಕ್ಕೆ ಈ ರೀತಿ ವರ್ತಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಸೂದ್ ಕುಟುಂಬಕ್ಕೆ ಭೇಟಿ ಕೊಟ್ಟಿದ್ದೆ. ಒಂದು ಕರುವನ್ನು ಯಾರೊ ಒಬ್ಬರು ಸಾಕುವುದಕ್ಕೆ ಕೊಟ್ಟಿದ್ದರು ಎಂದು ಮನೆಯವರು ಹೇಳಿದ್ದಾರೆ. ಮಸೂದ್ ಆ ಕರುವನ್ನು ಮೇಯಿಸಲು ಕರೆದೊಯ್ಯುತ್ತಿದ್ದ ಕೆಲ ಯುವಕರು ಈತನನ್ನು ಗುರಾಯಿಸುತ್ತಿದ್ದರು. ಇದರಿಂದ ಘರ್ಷಣೆ ನಡೆದು ಸಂಧಾನಕ್ಕೆ ಕರೆದಿದ್ದರು. ಆದ್ರೆ ಸಂಧಾನಕ್ಕೆ ಕರೆದವರು ಮಸೂದ್ ಹತ್ಯೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಪೊಲೀಸ್ ಮಹಾನಿರ್ದೇಶಕರು ನಾನು ಬಂದ ಫ್ಲೈಟ್ ನಲ್ಲಿ ಬಂದ್ರು. ಡಿ.ಜಿ ಬಂದಿದ್ದು ನೋಡಿ ಮಹತ್ವದ ಹೇಳಿಕೆ ಕೊಡ್ತಾರೆ ಅಂದು ಕೊಂಡಿದ್ದೆ. ಹತ್ಯೆ ನಡೆದಾಗಲೇ ಪೊಲೀಸ್ ಮಹಾನಿರ್ದೇಶಕರು ಬರಬೇಕಿತ್ತು ಬೆಂಗಳೂರಿನಲ್ಲಿ ಯಾವ ಮಹಾ ಘನಂದಾರಿ ಕೆಲಸ ಇದೆ? ವರ್ಗಾವಣೆ ಸೇರಿದಂತೆ ಕೆಲ ಹಣದ ವ್ಯವಹಾರ ನಡೆಸುತ್ತಿದ್ರಾ? ನನಗೆ ಹೇಳುವುದಕ್ಕೆ ಯಾವುದೇ ಮುಲಾಜಿಲ್ಲ. ಐದನೇ ತಾರೀಖಿನ ಒಳಗೆ ನಿಜವಾದ ಹಂತಕರನ್ನು ಅರೆಸ್ಟ್ ಮಾಡಬೇಕು. ಈ ಯಶಸ್ಸು ಕಾಣದಿದ್ದರೆ ಜೆ.ಡಿ.ಎಸ್. ನಿಂದ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

























