5:17 AM Thursday 13 - November 2025

ತಾರತಮ್ಯ ಬಿಟ್ಟು ರಾಜ್ಯದ ಆರು ಕೋಟಿ ಜನತೆಯ ಸರಕಾರದಂತೆ ವರ್ತಿಸಿ : ಸರಕಾರಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹ.

musllim mukanda
01/08/2022

ನಮ್ಮ ನೆರೆಯ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕೆಲವೇ ಕೆಲವು ದಿನಗಳ ಅಂತರದಲ್ಲಿ ಮಸೂದ್,ಪ್ರವೀಣ ಹಾಗೂ ಪಾಝಿಲ್ ಎಂಬ ಮೂವರು ಯುವಕರ ಅತ್ಯಮೂಲ್ಯ ಜೀವಗಳನ್ನು ದ್ವೇಷದ ರಾಜಕೀಯವು ಹೊಸಕಿ ಹಾಕಿದೆ.

ಈ ಕೊಲೆಗಳು ಆ ಯುವಕರ ಕುಟುಂಬಗಳನ್ನು ದುಃಖದ ಮಡುವಿನಲ್ಲಿ ಮುಳಗಿಸಿದ್ದಲ್ಲದೆ ಆ ಕುಟುಂಬಗಳ ಆಧಾರ ಸ್ತಂಭಗಳನ್ನು ಕೆಡವಿಹಾಕಿ ಅತಂತ್ರ ಸ್ಥಿತಿಗೆ ದೂಡಿದೆ. ಇಷ್ಟೇ ಅಲ್ಲ ಸಮಾಜದಲ್ಲಿ ದ್ವೇಷ, ಅಪನಂಬಿಕೆಗಳಿಗೆ ಇಂಧನವನ್ನು ಸುರಿದು ಜನಸಾಮಾನ್ಯರಲ್ಲಿ ಭಯ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಿದೆ.

ಈ ಸಮಾಜಘಾತುಕ ಕೃತ್ಯಗಳನ್ನು ಮತ್ತು ಸರಕಾರದ ಭದ್ರತಾಲೋಪಗಳನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಅದೇ ಸಂದರ್ಭದಲ್ಲಿ ರಾಜ್ಯ ಸರಕಾರದ ಪಕ್ಷಪಾತದಿಂದ ಕೂಡಿದ ನಿಲುವೂ ಪ್ರಶ್ನಾರ್ಹ. ರಾಜ್ಯದ ಆರು ಕೋಟಿ ಜನರ ಮುಖ್ಯಮಂತ್ರಿ ಎಂಬುದನ್ನು ಮರೆತು ಕೇವಲ ಒಂದು ವರ್ಗದ ಮುಖ್ಯಮಂತ್ರಿಯಂತೆ ಬಸವರಾಜ ಬೊಮ್ಮಾಯಿ ವರ್ತಿಸುತ್ತಿರುವುದು ರಾಜ್ಯದ ಭವಿಷ್ಯವನ್ನು ಅಂಧಕಾರದತ್ತ ತಳ್ಳುವಂತಿದೆ.

ಬೆಳ್ಳಾರೆಯ ಕೊಲೆಗೈಯಲ್ಪಟ್ಟ ಪ್ರವೀಣನ ಮನೆ ಭೇಟಿ ನೀಡಿ ಪರಿಹಾರ ಘೋಷಿಸಿದ ಮುಖ್ಯಮಂತ್ರಿಗಳು ಇದಕ್ಕಿಂತ ಮೊದಲು ಕೊಲೆಯಾದ ತರುಣ ಮಸೂದ್’ನ ಕುಟುಂಬಕ್ಕೆ ಪರಿಹಾರ ಘೋಷಿಸುವುದು ಬಿಡಿ ಆತನ ಮನೆ ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸು ಪ್ರಯತ್ನನ್ನು ಮಾಡಲಿಲ್ಲ. ಮೃತ ಯುವಕ ಫಾಝಿಲ್’ನ ಕುಟುಂಬಕ್ಕೂ ಯಾವುದೇ ಪರಿಹಾರ ಘೋಷಣೆಯನ್ನೂ ಮಾಡಲಿಲ್ಲ ಇದು ಖಂಡನೀಯ ಧೋರಣೆಯಾಗಿದೆ.

ಪ್ರವೀಣನ ಕೊಲೆಗಾರರ ಹುಡುಕಾಟದಲ್ಲಿ ತೀವ್ರತೆ ತೋರಿದರೆ ಮಸೂದ್ ಮತ್ತು ಫಾಝಿಲ್’ನ ಕೊಲೆಗಾರರ ಹುಡುಕಾಟದಲ್ಲಿ ಉದಾಸಿನತೆಯಲ್ಲಿ ಇದ್ದಂತೆ ಮೇಲ್ನೋಟಕ್ಕೆ ಅರಿವಾಗುತ್ತದೆ. ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ಖಾತ್ರಿ ಪಡಿಸಬೇಕಾದ ಜವಾಬ್ದಾರಿಯ ಸ್ಥಾನದಲ್ಲಿರುವ ಗೃಹಮಂತ್ರಿಗಳು, ಬೊಮ್ಮಾಯಿ ಸಂಪುಟದ ಇತರ ಮಂತ್ರಿಗಳು, ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ಕೆಲವು ಪ್ರಮುಖರು ನೀಡುತ್ತಿರುವ ಕೆಲವು ಹೇಳಿಕೆಗಳು ರಾಜ್ಯದ ಶಾಂತಿ ಸುವ್ಯವಸ್ಥೆಗೆ ವಿರುದ್ಧವಾಗಿದ್ದು ಜನಜೀವನವನ್ನು ಇನ್ನಷ್ಟು ಗೊಂದಲಮಯ ಗೊಳಿಸುತ್ತದೆ.

ಆದ್ದರಿಂದ ರಾಜ್ಯದ ಆಡಳಿತದ ಹೊಣೆಹೊತ್ತವರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ರಾಜ್ಯ ಸರಕಾರ ಮತ್ತು ಆಡಳಿತ ಪಕ್ಷವನ್ನು ಆಗ್ರಹಿಸುತ್ತದೆ. ಸರಕಾರ ಮತ್ತು ಪೋಲಿಸ್ ವ್ಯವಸ್ಥೆ ಜವಾಬ್ದಾರಿಯುತವಾಗಿ ನಡೆದುಕೊಂಡು ಆದಷ್ಟು ಬೇಗ ಕರಾವಳಿಯ ಹಾಗೂ ನಾಡಿನ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ ಜನಸಾಮಾನ್ಯರಿಗೆ ಸೂಕ್ತ ಭದ್ರತೆಯನ್ನು ನೀಡಿ ವಾತವರಣವನ್ನು ತಿಳಿಗೊಳಿಸಬೇಕಾಗಿ ಮುಸ್ಲಿಮ್ ಒಕ್ಕೂಟ ಒತ್ತಾಯಿಸುತ್ತದೆ.

ಅದೇ ಸಂದರ್ಭದಲ್ಲಿ ಕೊಲೆಗಾರರು ಮತ್ತು ಸಮಾಜದ್ರೋಹಿ ಶಕ್ತಿಗಳ ವಿರುದ್ಧ ತನಿಖೆಯನ್ನು ತೀವ್ರಗೊಳಿಸಿ ತಪ್ಪಿತಸ್ಥರನ್ನು ಕಾರಾಗೃಹಕ್ಕೆ ತಳ್ಳಬೇಕು. ಶಾಂತಿ ಕದಡುವ ಉದ್ರೇಕಕಾರಿ ಭಾಷಣಗಳು, ಹೇಳಿಕೆಗಳ ಮೂಲಕ ಉದ್ವಿಗ್ನತೆ ಸೃಷ್ಟಿಸುವವರು, ಸಾಮಾಜಿಕ ಜಾಲತಾಣಗಳನ್ನು ದ್ವೇಷ ಹರಡಲು ಬಳಸುತ್ತಿರುವವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್ ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ

Exit mobile version