ನೇಹಾ ಹಿರೇಮಠ್ ಹತ್ಯೆ ಪ್ರಕರಣ: ಲವ್ ಜಿಹಾದ್ ಆರೋಪ

ಹುಬ್ಬಳ್ಳಿ: ಖಾಸಗಿ ಕಾಲೇಜಿನ ಕ್ಯಾಂಪಸ್ ನಲ್ಲಿ ಕಾರ್ಪೋರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾಳನ್ನು ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಯುವತಿಯ ತಂದೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಇದೇ ವೇಳೆ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ನಿರಂಜನ್ ಹಿರೇಮಠ್ ಅಳಲು ತೋಡಿಕೊಂಡಿದ್ದಾರೆ. ಇನ್ನೂ ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಹ್ಲಾದ್ ಜೋಶಿ ಲವ್ ಜಿಹಾದ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್ ಆಯಾಮದಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ ನಗರದ ಪ್ರತಿಷ್ಠಿತ ಬಿವಿಬಿ ಕಾಲೇಜಿನ ಅಂಗಳದಲ್ಲಿ ಈ ಘಟನೆ ನಡೆದಿತ್ತು, ಹುಬ್ಬಳ್ಳಿ ನಗರದ ನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಎಂಬುವವರ ಪುತ್ರಿ ನೇಹಾ ಹಿರೇಮಠ ಕೊಲೆಯಾದ ಯುವತಿ. ಈಕೆಯನ್ನು ಬೆಳಗಾವಿ ಜಿಲ್ಲೆ ಸವದತ್ತಿ ನಿವಾಸಿ ಫಯಾಜ್ ಎಂಬಾತ ಕೊಲೆ ಮಾಡಿದ್ದು, ಆತನನ್ನು ಘಟನೆ ನಡೆದ ತಕ್ಷಣವೇ ಬಂಧಿಸಲಾಗಿದೆ. ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಬಿವಿಬಿ ಕಾಲೇಜಿನಲ್ಲಿ ಎಂಸಿಎ ವ್ಯಾಸಂಗ ಮಾಡುತ್ತಿದ್ದ ನೇಹಾ ಹಿರೇಮಠ ಗುರುವಾರ ತರಗತಿ ಮುಗಿಸಿ ವಾಪಾಸ್ ಬರುವಾಗ ಏಕಾಏಕಿ ದಾಳಿ ಮಾಡಿದ ಆರೋಪಿ ಚಾಕುವಿನಿಂದ ಹಲವು ಬಾರಿ ಕುತ್ತಿಗೆ ಹಾಗೂ ಇತರೆ ಭಾಗಕ್ಕೆ ತಿವಿದಿದ್ಧಾನೆ, ಆಕೆ ನರಳಾಡಿ ಚೀರಿಕೊಂಡರೂ ಬಿಟ್ಟಿಲ್ಲ. ಅಲ್ಲಿದ್ದ ಸಿಬ್ಬಂದಿ ಬರುವ ಹೊತ್ತಿಗೆ ಅಲ್ಲಿಂದ ಪರಾರಿಯಾಗಲು ಆರೋಪಿ ಫಯಾಜ್ ಯತ್ನಿಸಿದ್ದಾನೆ. ಅಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನೇಹಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತಾದರೂ ಪ್ರಾಣ ಹೋಗಿತ್ತು ಎಂದು ವೈದ್ಯರು ಘೋಷಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನೇಹಾ ದೇಹ ಸ್ಥಳಾಂತರಿಸಲು ನೆರವಾದರು. ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳು, ಕಾಲೇಜಿನ ಸಿಬ್ಬಂದಿ ಹಾಗೂ ಸಹಪಾಠಿಗಳಿಂದ ವಿವರವನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಅಲ್ಲದೇ ಕಾಲೇಜು ಆವರಣದಲ್ಲಿದ್ದ ಸಿಸಿ ಕ್ಯಾಮರಾ ಫೂಟೇಜ್ ಸಹ ಕೂಡ ಸಂಗ್ರಹಿಸಿದ್ದಾರೆ. ಇದರಲ್ಲಿ ಫಯಾಜ್ ಆಕೆಯನ್ನು ಹಿಂಬಾಲಿಸಿರುವುದು, ಕೊಲೆ ಮಾಡಿರುವುದು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫಯಾಜ್ ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿಯವನು.ಇದೇ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ನೇಹಾ ಜತೆಗೆ ಪರಿಚಯವಾಗಿತ್ತು. ಆಕೆಯನ್ನು ಪ್ರೀತಿಸುವುದಾಗಿ ಹೇಳಿದ್ದ. ಆದರೆ ಆಕೆ ಅದಕ್ಕೆ ಒಪ್ಪಿರಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಹಣಕಾಸಿನ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಿದ್ದವು. ಗುರುವಾರ ಕೂಡ ಕಾಲೇಜಿಗೆ ಬಂದಾಗ ಜಗಳವಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆತ ಮಗಳನ್ನು ಪ್ರೀತಿಸುವುದು ತಂದೆ ಹಾಗೂ ಕುಟುಂಬದವರಿಗೆ ತಿಳಿದಿತ್ತು. ಆದರೆ ಕುಟುಂಬದವರು ಒಪ್ಪಿರಲಿಲ್ಲ. ಇತ್ತೀಚಿಗೆ ನೇಹಾ ಆತನೊಂದಿಗೆ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಇದು ಆತನ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಕೊಲೆಗೆ ಕಾರಣ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth