ಜ್ಞಾನದೇಗುಲವಿದು ಕೈಮುಗಿದು ಒಳಗೆ ಬನ್ನಿ ಘೋಷವಾಕ್ಯವನ್ನು ತೆಗೆಯುವ ಆದೇಶ ಹೊರಡಿಸಿಲ್ಲ: ಸಚಿವ ಎಚ್.ಸಿ. ಮಹಾದೇವಪ್ಪ

ಬೆಂಗಳೂರು: ಜ್ಞಾನದೇಗುಲವಿದು ಕೈಮುಗಿದು ಒಳಗೆ ಬನ್ನಿ ಘೋಷವಾಕ್ಯವನ್ನು ತೆಗೆದುಹಾಕುವ ಯಾವುದೇ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ತಿಳಿಸಿದ್ದಾರೆ.
ಸೋಮವಾರ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಪ್ರಸ್ತುತ ಇರುವ ಘೋಷವಾಕ್ಯ ತೆಗೆದುಹಾಕುವ ಯಾವುದೇ ಆದೇಶ ನೀಡಿಲ್ಲ ಎಂದು ಹೇಳಿದ್ದಾರೆ.
ಮಕ್ಕಳಲ್ಲಿ ಕಲಿಕೆಯ ದೃಷ್ಟಿಯಿಂದ ವೈಜ್ಞಾನಿಕತೆ, ವೈಚಾರಿಕತೆ ಮೂಡಿಸಲು ಜೊತೆಗೆ ಯೋಚನಾ ಶಕ್ತಿಯನ್ನು ಹರಡುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಲಾಗಿದೆ. ಕೆಲವರು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಶಾಲೆಗಳಲ್ಲಿ ಹಾಕಿದರೆ ಹೇಗೆ ಎಂಬ ಆಲೋಚನೆ ಮುಂದಿಟ್ಟಿದ್ದಾರೆ. ಈ ಆಲೋಚನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ ಎಂದು ಅವರು ಹೇಳಿದರು.
ಧೈರ್ಯವಾಗಿ ಪ್ರಶ್ನಿಸಿ ಎಂದರೆ ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಪ್ರಬಂಧದ ಆಶಯ. ಕುವೆಂಪು ಅವರಿಗೆ ಅವಮಾನ ಮಾಡುವ ಎಸಗುವ ಯಾವುದೇ ಪ್ರಮಾದ ಇಲ್ಲಿ ಜರುಗಿರುವುದಿಲ್ಲ ಎಂದು ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ “ಜ್ಞಾನದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ” ಎಂಬ ಘೋಷ ವಾಕ್ಯದ ಫೋಟೋ ವೈರಲ್ ಆದ ಬಳಿಕ ಬಿಜೆಪಿ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.
ಇನ್ನೂ ಕೈಮುಗಿದು ಒಳಗೆ ಬನ್ನಿ ಅನ್ನೋದಕ್ಕಿಂತಲೂ ಜ್ಞಾನದೇಗುಲಕ್ಕೆ ಧೈರ್ಯವಾಗಿ ಒಳಗೆ ಬನ್ನಿ ಎಂದು ಕರೆಯುವುದು ಸೂಕ್ತ, ಇಲ್ಲಿ ಕುವೆಂಪು ಅವರ ವಾಕ್ಯಗಳಿಗೆ ಅವಮಾನಿಸುವ ಉದ್ದೇಶವಿಲ್ಲ, ಬಿಜೆಪಿ ಪಕ್ಷದವರು ಕುವೆಂಪು ಅವರ ವಾಕ್ಯಗಳನ್ನು ಪರಿಪಾಲಿಸುವುದೇ ಆದರೆ, ಕುವೆಂಪು ಅವರು ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಹೊಂದಿದ್ದ ನಿಲುವುಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.