210 ಮಂದಿ ಅಶಕ್ತರ, ಸೋಲಿಗ ವಿದ್ಯಾರ್ಥಿಗಳನ್ನು ದತ್ತು ಪಡೆಯಲು ಮುಂದಾದ ಅಧಿಕಾರಿಗಳು!!

ಚಾಮರಾಜನಗರ: ಅಶಕ್ತರು, ಏಕಪಾಲಕರು ಹಾಗೂ ಸೋಲಿಗ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಚಾಮರಾಜನಗರ ಡಿಸಿ ಶಿಲ್ಪಾನಾಗ್ ನೂತನ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದ್ದಾರೆ.
ಹೌದು…, ಚಾಮರಾಜನಗರದಲ್ಲಿ ಶೈಕ್ಷಣಿಕ ಕ್ರಾಂತಿಗೆ ಜಿಲ್ಲಾಡಳಿತ ಮುಂದಾಗಿದ್ದು ಡಿಸಿ ಶಿಲ್ಪಾನಾಗ್ ಅವರಿಂದ ಮಹತ್ವದ ಯೋಜನೆ ರೂಪಿಸಿ- ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಬುಡಕಟ್ಟು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಶೈಕ್ಷಣಿಕ ದತ್ತು ತೆಗೆದುಕೊಳ್ಳಲಿದ್ದಾರೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಟಾಸ್ಕ್:
ಕ್ಷೇತ್ರ ಶಿಕ್ಷಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆಯ ತಲಾ ಓರ್ವ ಅಧಿಕಾರಿ 10 ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಪಡೆದು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಮೇಲೆ ನಿಗಾ ಇಡಲಿದ್ದಾರೆ. ಜೊತೆಗೆ, ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಬಗೆಹರಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆ ತೇರ್ಗಡೆಯಾಗುವ ಜೊತೆಗೆ ಪಿಯು ಶಿಕ್ಷಣ ಮುಂದುವರೆಸುವ ತನಕವೂ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ.
210 ಮಂದಿ ವಿದ್ಯಾರ್ಥಿಗಳು:
ಚಾಮರಾಜನಗರ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ 166 ಮಂದಿ ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ವ್ಯಾಸಂಗ ಮಾಡುತ್ತಿದ್ದು ಕಳೆದ ಬಾರಿ 88 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಯಲ್ಲಿ ಫೇಲಾಗಿದ್ದು ಇವರಲ್ಲಿ ಕೋವಿಡ್ ಸಂತ್ರಸ್ತರ ಮಕ್ಕಳು, ಬುಡಕಟ್ಟು ಸಮುದಾಯ, ಸಿಂಗಲ್ ಪೇರೆಂಟ್ ವಿದ್ಯಾರ್ಥಿಗಳಿದ್ದು ಇವರನ್ನು ಅಧಿಕಾರಿಗಳು ಶೈಕ್ಷಣಿಕ ದತ್ತು ಪಡೆಯಲಿದ್ದಾರೆ.
ನವೆಂಬರ್ ನಿಂದ ಡಿಸೆಂಬರ್ ವರೆಗೆ ವಿಶೇಷ ತರಗತಿ ನಡೆಸಲು ನಿರ್ಧಾರ ಮಾಡಲಾಗಿದ್ದು 210 ವಿದ್ಯಾರ್ಥಿಗಳನ್ನು ದತ್ತು ಪಡೆಯಲು ತಯಾರಿ ನಡೆಸಲಾಗುತ್ತಿದೆ, ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸಲು ಚಿಂತನೆ, ಸಂಘ ಸಂಸ್ಥೆಗಳಿಂದ ಮಕ್ಕಳ ಊಟ, ವಸತಿಗೆ ವ್ಯವಸ್ಥೆ ಕೂಡ ಜಿಲ್ಲಾಡಳಿತ ಮಾಡಲು ಪ್ಲಾನ್ ಮಾಡಿಕೊಂಡಿದೆ.
ಒಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಡಿಸಿ ಶಿಲ್ಪಾನಾಗ್ ವಿನೂತನ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ವಲಯದಲ್ಲಿ ಗಮನ ಸೆಳೆದಿದ್ದಾರೆ.